Connect with us

LATEST NEWS

ಕೆಳಬೆನ್ನು ನೋವು ಮತ್ತು ಆಮವಾತಕ್ಕೆ ಅಳಲೆಕಾಯಿಯ ಆಯುರ್ವೇದ ಮನೆಮದ್ದು

ಕೆಳಬೆನ್ನು ನೋವು ಮತ್ತು ಆಮವಾತ ಬಹಳ ನೋವಿನಿಂದ ಕೂಡಿದ ಸಂಧಿ ರೋಗಗಳಾಗಿವೆ. ಎರಡಕ್ಕೂ ಸರಿಯಾದ ಆಯುರ್ವೇದ ಚಿಕಿತ್ಸೆಯ ಅಗತ್ಯವಿದೆ. ಆದರೆ ಕೆಲವು ಮನೆಮದ್ದುಗಳು ರೋಗಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮತ್ತು ತೊಡಕುಗಳಿಗೆ ಚಿಕಿತ್ಸೆ ನೀಡಲು ತುಂಬಾ ಸಹಾಯಕವಾಗಿವೆ. ಈ ಎರಡೂ ಪರಿಸ್ಥಿತಿಗಳಲ್ಲಿ ಉಪಯುಕ್ತವಾದ ಆಯುರ್ವೇದ ಮನೆಮದ್ದು ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:
ಹರಳೆಣ್ಣೆ- 5 ಮಿಲಿ
ಅಳಲೆಕಾಯಿಯ ನುಣ್ಣಗಿನ ಪುಡಿ – 5 ಗ್ರಾಂ
ಬೆಚ್ಚಗಿನ ನೀರು – ಅರ್ಧ ಕಪ್.

ತಯಾರಿಸುವ ವಿಧಾನ:
ಅಳಲೆಕಾಯಿಯ ಪುಡಿಯನ್ನು ಹರಳೆಣ್ಣೆಯೊಂದಿಗೆ ಬೆರೆಸಿ ಚೆನ್ನಾಗಿ ಪೇಸ್ಟ್ ಮಾಡಿ. ಇದನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು.

ಸೇವನಾ ಪ್ರಮಾಣ ಮತ್ತು ಸೇವಿಸುವ ವಿಧಾನ:
ಈ ಪೇಸ್ಟ್‌ನ 3 ಗ್ರಾಂ ಅನ್ನು ದಿನಕ್ಕೆ ಒಮ್ಮೆ, ಬೆಳಿಗ್ಗೆ ಅಥವಾ ಸಂಜೆ, ಆಹಾರದ ನಂತರ ಸೇವಿಸಬೇಕು. ರುಚಿಯು ಒಗರು-ಕಹಿಯಾಗಿರುವುದರಿಂದ, ಈ ಔಷಧಿಯನ್ನು ತೆಗೆದುಕೊಂಡ ನಂತರ ಬೆಚ್ಚಗಿನ ನೀರನ್ನು ಕುಡಿಯುವುದು ಒಳ್ಳೆಯದು. ಇದು ಸುಲಭವಾಗಿ ನುಂಗಲು ಸಹಾಯ ಮಾಡುತ್ತದೆ.

ಈ ಔಷಧಿಯನ್ನು ಎಷ್ಟು ಸಮಯದವರೆಗೆ ಸಂಗ್ರಹಿಸಬಹುದು?
• ನೀವು ಹರಳೆಣ್ಣೆಮತ್ತು ಅಳಲೆಕಾಯಿಯ ಪುಡಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿದರೆ, ಎರಡನ್ನೂ ಗಾಳಿಯಾಡದ ಬಿಗಿಯಾದ ಪಾತ್ರೆಗಳಲ್ಲಿ 2 ರಿಂದ 6 ತಿಂಗಳವರೆಗೆ ಸಂಗ್ರಹಿಸಬಹುದು.
• ನೀವು ಇವೆರಡನ್ನೂ ಸಮಾನ ಪ್ರಮಾಣದಲ್ಲಿ ಮಿಶ್ರ ಮಾಡಿದರೆ ಮತ್ತು ಪೇಸ್ಟ್ ಅನ್ನು ಸಿದ್ಧಪಡಿಸಿದರೆ, ಪೇಸ್ಟ್ ಅನ್ನು 7 ದಿನಗಳಲ್ಲಿ ಖಾಲಿ ಮಾಡಬೇಕಾಗುತ್ತದೆ.

ರುಚಿ: ಒಗರು, ಸ್ವಲ್ಪ ಕಹಿ.

ಉಪಯುಕ್ತತೆ:
ಇದನ್ನು ಆಮವಾತ ಮತ್ತು ಕೆಳಬೆನ್ನು ನೋವಿಗೆ ಪರಿಹಾರವಾಗಿ ಸೂಚಿಸಲಾಗುತ್ತದೆ.

ಎಷ್ಟು ಸಮಯ ತೆಗೆದುಕೊಳ್ಳಬೇಕು?
ರೋಗಲಕ್ಷಣಗಳು ಮತ್ತು ರೋಗದ ತೀವ್ರತೆಯ ಆಧಾರದ ಮೇಲೆ ಈ ಪರಿಹಾರವನ್ನು 1-4 ವಾರಗಳವರೆಗೆ ತೆಗೆದುಕೊಳ್ಳಬಹುದು.

ಆಮವಾತದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ?
• ಆಯುರ್ವೇದದ ಪ್ರಕಾರ, ಆಮವಾತವು ಆಮದ ಕಾರಣದಿಂದ ಉಂಟಾಗುತ್ತದೆ – ಅಸಮರ್ಪಕ ಜೀರ್ಣಕ್ರಿಯೆಯ ಶಕ್ತಿ, ಬದಲಾದ ರೋಗನಿರೋಧಕ ಶಕ್ತಿ, ದೇಹದ ವಿವಿಧ ಸ್ರೋತಗಳನ್ನು ನಿರ್ಬಂಧಿಸುತ್ತದೆ. ಅಳಲೆಕಾಯಿ ಮತ್ತು ಹರಳೆಣ್ಣೆ ಎರಡನ್ನೂ ಆಮವಾತದ ಚಿಕಿತ್ಸೆಯಲ್ಲಿ ಸೂಚಿಸಲಾಗುತ್ತದೆ. ಇದು ದೇಹದಿಂದ ಆಮವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಶುದ್ಧೀಕರಣವನ್ನು ಪ್ರೇರೇಪಿಸುವ ಮೂಲಕ ಹೊಟ್ಟೆ ಮತ್ತು ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

• ಅಳಲೆಕಾಯಿಯು ‘ಆಮಾ’ ಚಿಕಿತ್ಸೆಯಲ್ಲಿ ಬಹಳ ಪ್ರಯೋಜನಕಾರಿಯಾಗಿದೆ ಮತ್ತು ಪುನರ್ಯೌವನಗೊಳಿಸುವ ಗುಣಗಳನ್ನು ಹೊಂದಿದೆ. ಇದು ತ್ರಿದೋಷವನ್ನು ಸಮತೋಲನಗೊಳಿಸುವ ಗುಣವನ್ನು ಹೊಂದಿದೆ. ಇದು ತ್ರಿಫಲ ಗುಂಪಿನ ಹಣ್ಣುಗಳಲ್ಲಿ ಒಂದಾಗಿದೆ.ಹಲವು ಸಂಧಿರೋಗಗಳಲ್ಲಿ ಸಾಮಾನ್ಯ ಲಕ್ಷಣವಾಗಿರುವ ನೋವು ಮತ್ತು ಬಿಗಿತವನ್ನು ಪರಿಹರಿಸಲು ಹರಳೆಣ್ಣೆ ಉಪಯುಕ್ತ.

• ಮಲಬದ್ಧತೆ ಆಮವಾತ ಸಂಬಂಧಿತ ಲಕ್ಷಣಗಳಲ್ಲಿ ಒಂದಾಗಿದೆ. ಈ ಔಷಧಿಯು ಸೌಮ್ಯ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ.

ಕೆಳಬೆನ್ನು ನೋವಿನಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ?
ಕೆಳಬೆನ್ನು ನೋವು (ಸಿಯಾಟಿಕಾ / ಸ್ಲಿಪ್ ಡಿಸ್ಕ್) ಮೂಳೆಯ ಕ್ಷೀಣಗೊಳ್ಳುವ ಕಾಯಿಲೆಯಾಗಿದೆ. ಮೂಳೆ ಕ್ಷೀಣಗೊಳ್ಳುವ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಆಯುರ್ವೇದ ವಿಧಾನದಲ್ಲಿ, ತೈಲಗಳನ್ನು ಬಳಸಲಾಗುತ್ತದೆ. ಅದಕ್ಕಾಗಿಯೇ ಸಂಧಿವಾತ ಚಿಕಿತ್ಸೆಯಲ್ಲಿ ಬಹಳಷ್ಟು ತೈಲಗಳನ್ನು ಬಳಸುವುದನ್ನು ನೀವು ನೋಡುತ್ತೀರಿ.

ಉದಾಹರಣೆಗೆ, ಅಭ್ಯಂಗ (ಎಣ್ಣೆ ಮಸಾಜ್), ಸ್ನೇಹ ಬಸ್ತಿ ಇತ್ಯಾದಿಗಳಿಗೆ ಮಹಾನಾರಾಯಣ ತೈಲದಂತಹ ತೈಲಗಳ ಬಳಕೆ.
ಕಟಿ ಬಸ್ತಿಯಲ್ಲಿ ಕೊಟ್ಟಂಚುಕ್ಕಡಿ ತೈಲ, ಬಲ ಅಶ್ವಗಂಧಾದಿ ತೈಲ ಇತ್ಯಾದಿ ಎಣ್ಣೆಗಳ ಬಳಕೆ, ಇತ್ಯಾದಿ.
ಕ್ಷೀರಬಲ ತೈಲ 101 ಅನ್ನು ಅಸ್ಥಿಸಂಧಿವಾತದ ಸಂದರ್ಭದಲ್ಲಿ ಮೌಖಿಕ ಸೇವನೆಗಾಗಿ ಬಳಸುವುದು ಇತ್ಯಾದಿ.

ಆದ್ದರಿಂದ, ಹರಳೆಣ್ಣೆಯನ್ನು ಕೆಳಬೆನ್ನು ನೋವಿನಲ್ಲಿ ಪುನರ್ಯೌವನಗೊಳಿಸುವ ಏಜೆಂಟ್ ಆಗಿ ಬಳಸಲಾಗುತ್ತದೆ, ಇದು ಪೀಡಿತ ಕೀಲುಗಳಲ್ಲಿ ಮೂಳೆ ದ್ರವ್ಯರಾಶಿಯ ಪುನರುತ್ಪಾದನೆಯನ್ನು ಮಾಡುತ್ತದೆ. ಅಳಲೆಕಾಯಿಯ ಜೊತೆಗೆ ಹರಳೆಣ್ಣೆ ಉರಿಯೂತ ನಿವಾರಕ ಪರಿಣಾಮವನ್ನು ತರುತ್ತದೆ ಮತ್ತು ನೋವು ಮತ್ತು ಉರಿಯೂತವನ್ನು ನಿವಾರಿಸಲು ಉಪಯುಕ್ತವಾಗಿದೆ.

ಅಳಲೆಕಾಯಿಯ ಪುಡಿಯನ್ನು ಕ್ಯಾಪ್ಸುಲ್ ಅಥವಾ ಮಾತ್ರೆಯೊಂದಿಗೆ ಬದಲಾಯಿಸಬಹುದೇ?
ಸಾಂಪ್ರದಾಯಿಕವಾಗಿ ಅಳಲೆಕಾಯಿಯ ಪುಡಿಯನ್ನು ಉಪಯೋಗಿಸುವಂತೆ ಹೇಳಲಾಗುತ್ತದೆ. ಆದ್ದರಿಂದ, ಸಾಂಪ್ರದಾಯಿಕ ಉಲ್ಲೇಖಕ್ಕೆ ಅಂಟಿಕೊಳ್ಳುವುದು ಉತ್ತಮ. ರುಚಿಯನ್ನು ಸಹಿಸಲಾಗದಿದ್ದರೆ, ಹರಳೆಣ್ಣೆ ಜೊತೆಗೆ 1 ಮಾತ್ರೆ / ಕ್ಯಾಪ್ಸುಲ್ ಅನ್ನು ಬಳಸಬಹುದು.

ಮಕ್ಕಳಿಗೆ ಸುರಕ್ಷಿತವೇ?
ಇಲ್ಲ.

ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಸುರಕ್ಷಿತವೇ?
ಗರ್ಭಾವಸ್ಥೆಯಲ್ಲಿ ಇದನ್ನು ತಪ್ಪಿಸಿ. ಹಾಲುಣಿಸುವ ಅವಧಿಯಲ್ಲಿ ವೈದ್ಯಕೀಯ ಸಲಹೆ ಪಡೆಯಿರಿ. ಹಾಲುಣಿಸುವ ಸಮಯದಲ್ಲಿ ಹೆಚ್ಚೆಂದರೆ ಇದನ್ನು 5-10 ದಿನಗಳವರೆಗೆ ತೆಗೆದುಕೊಳ್ಳಬಹುದು. ಹಾಲುಣಿಸುವ ಸಮಯದಲ್ಲಿ ಈ ಪರಿಹಾರದ ದೀರ್ಘಾವಧಿಯ ಬಳಕೆಯನ್ನು ಶಿಫಾರಸು ಮಾಡುವುದಿಲ್ಲ.

ಅಡ್ಡ ಪರಿಣಾಮಗಳು:
ಇದು ವಿರೇಚಕ ಪರಿಣಾಮವನ್ನು ಹೊಂದಿರುವುದರಿಂದ, ಅತಿಸಾರ ಹೊಂದಿರುವ ಜನರು ಇದನ್ನು ತಪ್ಪಿಸಬೇಕು.
ಕೆಲವರು ಈ ಪರಿಹಾರದ ರುಚಿ / ವಾಸನೆಯನ್ನು ಸಹಿಸುವುದಿಲ್ಲ.
ಈ (ಅಥವಾ ಯಾವುದೇ ಇತರ) ಮನೆಮದ್ದನ್ನು ತೆಗೆದುಕೊಳ್ಳುವ ಮೊದಲು ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಲೇಖಕರು: ಡಾ. ಜನಾರ್ಧನ ವಿ ಹೆಬ್ಬಾರ್

ಆಯುರ್ವೇದ ವೈದ್ಯರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಈಝೀ ಆಯುರ್ವೇದ ಆಸ್ಪತ್ರೆ, ಮಂಗಳೂರು

ಈ ಲೇಖನವನ್ನು ಡಾ. ಜನಾರ್ಧನ ವಿ ಹೆಬ್ಬಾರ್ ಅವರು ಬರೆದ “ಸುಗಮ ಜೀವನಕ್ಕಾಗಿ ಆಯುರ್ವೇದ” ಎಂಬ ಪುಸ್ತಕದಿಂದ ಆರಿಸಲಾಗಿದೆ. ಈ ಪುಸ್ತಕವನ್ನು ಖರೀದಿಸಲು ಈ ಕೆಳಗಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಿ:

Share Information
Continue Reading
Advertisement
Click to comment

Leave a Reply

Your email address will not be published. Required fields are marked *