LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಟೋರಿಕ್ಷಾಗಳಿಗೆ ಏಕರೂಪದ ಪರ್ಮಿಟ್ ನೀಡಲು ಗ್ರಾಮಾಂತರ ಚಾಲಕರ ಒತ್ತಾಯ
ಮಂಗಳೂರು ಮಾರ್ಚ್ 06: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಟೋರಿಕ್ಷಾಗಳಿಗೆ ಏಕರೂಪದ ಪರ್ಮಿಟ್ ನೀಡಬೇಕೆಂದು ಗ್ರಾಮಾಂತರ ರಿಕ್ಷಾ ಚಾಲಕರು ಆಗ್ರಹಿಸಿದ್ದು, ಜಿಲ್ಲಾಡಳಿತ ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಟೋ ಚಾಲಕರ ಸಂಘಟನೆ ಮುಖಂಡ ಅಬ್ದುಲ್ ಜಲೀಲ್, ಜಿಲ್ಲೆಯಲ್ಲಿ ಪ್ರಸ್ತತ ನಗರ ಪ್ರದೇಶಗಳಿಗೆ ಒಂದು ರೀತಿಯ ಪರ್ಮಿಟ್, ಗ್ರಾಮಾಂತರದ ರಿಕ್ಷಾಗಳಿಗೆ ಇನ್ನೊಂದು ಪರ್ಮಿಟ್ ವ್ಯವಸ್ಥೆ ಇದೆ. ಇಂಥ ಭೇದ ಸರಿಯಲ್ಲ, ಉಳಿದ ಜಿಲ್ಲೆಗಳಲ್ಲಿ ಇರುವಂತೆ ಏಕರೂಪದ ಪರ್ಮಿಟ್ ನೀಡಬೇಕು ಎಂದು ಒತ್ತಾಯಿಸಿದರು. ದ.ಕ. ಜಿಲ್ಲೆಯನ್ನು ಹೊರತುಪಡಿಸಿದರೆ ರಾಜ್ಯದ ಯಾವ ಜಿಲ್ಲೆಯಲ್ಲೂ ಆಟೋರಿಕ್ಷಾಗಳಿಗೆ ವಿವಿಧ ಬಗೆಯ ಪರ್ಮಿಟ್‌ಗಳು ಇಲ್ಲ. ಆದರೆ ದಕ್ಷಿಣಕನ್ನಡದಲ್ಲಿ ಮಾತ್ರ ಈ ರೀತಿಯ ವ್ಯವಸ್ಥೆ ಇದೆ. ಅಲ್ಲದೆ ಗ್ರಾಮಾಂತರದ ರಿಕ್ಷಾಗಳು ಮೂರು ಕಿ.ಮೀ. ಆಚೀಚೆ ಸಂಚರಿಸಿದರೆ ನಗರ ಪ್ರದೇಶ ಬರುತ್ತದೆ, ಗ್ರಾಮಾಂತರದ ಗಡಿ ದಾಟಿದರೆ ಸಾಕು ಆರ್‌ಟಿಒ ಅಧಿಕಾರಿಗಳು 10 ಸಾವಿರ ರು. ದಂಡ ಹಾಕುತ್ತಾರೆ. ತಿಂಗಳಿಗೆ ಏನಿಲ್ಲವೆಂದರೂ 10-20 ಚಾಲಕರ ಮೇಲೆ ದಂಡ ಹಾಕುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ಸಣ್ಣ ದುಡಿಮೆ ದುಡಿಯುವವರ ಮೇಲೆ ಈ ಬೃಹತ್ ಮೊತ್ತ ತೀವ್ರ ಹೊರೆಯಾಗುತ್ತಿದ್ದು, ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಹಿಂದೆ ಆರ್‌ಟಿಒ ಬಳಿ ಮನವಿ ಮಾಡಿದ್ದಕ್ಕೆ ಒಂದು ತಿಂಗಳು ದಂಡ ಹಾಕುವುದು ನಿಲ್ಲಿಸಿದ್ದರು. ಈಗ ಮತ್ತೆ ಆರಂಭವಾಗಿದೆ ಎಂದು ಜಲೀಲ್ ಅಳಲು ತೋಡಿಕೊಂಡರು.
ಆದ್ದರಿಂದ ಏಕರೂಪದ ಪರ್ಮಿಟ್ ನೀಡುವಂತೆ ಸಂಬಂಧಪಟ್ಟವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಸ್ಪಂದನೆ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಮೂಲಕ ತೀವ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.