KARNATAKA
ಬೆಂಗಳೂರು ಭೀಕರ ರಸ್ತೆ ಅಪಘಾತದಲ್ಲಿ ಹೊಸೂರು ಶಾಸಕನ ಪುತ್ರ ಸೇರಿ 7 ಸಾವು
ಬೆಂಗಳೂರು ಅಗಸ್ಟ್ 31: ಬೆಂಗಳೂರಿನ ಕೋರಮಂಗಲದಲ್ಲಿ ಸೋಮವಾರ ತಡರಾತ್ರಿ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೊಸೂರು ಶಾಸಕ ಪ್ರಕಾಶ್ ಪುತ್ರ ಅರುಣಾಸಾಗರ್ ಹಾಗೂ ಭಾವಿ ಪತ್ನಿ ಬಿಂದು ಕೂಡ ದುರ್ಮರಣ ಹೊಂದಿದ್ದಾರೆ.
ಕೊರಮಂಗಲದ ಮಂಗಳ ಕಲ್ಯಾಣ ಮಂಟಪ ಸಮೀಪದಲ್ಲಿ ಅತೀ ವೇಗವಾಗಿದ್ದ ಆಡಿ ಕ್ಯೂ3 ಕಾರು, ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗಕ್ಕೆ ನುಗ್ಗಿ ವಿದ್ಯುತ್ ಕಂಬಕ್ಕೆ ಗುದ್ದಿದ್ದರಿಂದ ಈ ಅವಘಡ ಸಂಭವಿಸಿದೆ.
ಕೆಎ 03 ಎಂವೈ 6666 ನಂಬರಿನ ಡೀಸೆಲ್ ಮಾಡೆಲ್ ಕಾರು ತಮಿಳುನಾಡಿನ ಸಂಜೀವಿನಿ ಬ್ಲೂ ಮೆಟಲ್ಸ್ ಕಂಪನಿಗೆ ಸೇರಿದ್ದು, 2015ರಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿ ನೋಂದಣಿಯಾಗಿದೆ. ಸಂಜೀವಿನಿ ಬ್ಲೂ ಮೆಟಲ್ಸ್ ಕಂಪನಿ ಹೊಸೂರು ರಸ್ತೆಯಲ್ಲಿದೆ. ಹಾಲೋ ಬ್ರಿಕ್ಸ್, ಎಂ ಸ್ಯಾಂಡ್ ಮರಳು ತಯಾರಿಸುವ ಕಂಪನಿ ಇದಾಗಿದೆ. ಕಂಪನಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೂಡ ಬ್ರಾಂಚ್ ಹೊಂದಿದೆ.
ಅರುಣಾಸಾಗರ್ ಸ್ನೇಹಿತರ ಜೊತೆ ಕೋರಮಂಗಲದ ಝೋಲೋ ಪಿಜಿಯಲ್ಲಿ ಉಳಿದುಕೊಳ್ಳುತ್ತಿದ್ದರು. ರಾತ್ರಿ ಪಾರ್ಟಿ ಮಾಡುತ್ತಿದ್ದರು. ಅದೇ ರೀತಿ ಸೋಮವಾರ ರಾತ್ರಿ ಸಹ ಪಾರ್ಟಿ ಮುಗಿಸಿ ಬರುವಾಗ ಅಪಘಾತ ಸಂಭವಿಸಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ.
ವೇಗವಾಗಿ ಬಂದು ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಕಾರ್ ಡಿಕ್ಕಿ ಹೊಡೆದಿದೆ. ಆಡಿ ಕ್ಯೂ 3 ಕಾರಿನಲ್ಲಿದ್ದ ಮೂವರು ಮಹಿಳೆಯರು ಹಾಗೂ ನಾಲ್ವರು ಪುರುಷರು ಒಟ್ಟು 7 ಜನ ಸಾವನ್ನಪ್ಪಿದ್ದಾರೆ. 6 ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಎಲ್ಲರೂ 25-30ರ ವಯೋಮಾನದವರು ಮತ್ತು ಸ್ನೇಹಿತರು.