Connect with us

LATEST NEWS

ಬಜರಂಗದಳ ಕಾರ್ಯಕರ್ತರಿಗೆ ಬಿಜೆಪಿಯವರಿಂದಲೇ ಹಲ್ಲೆ !

ಬಜರಂಗದಳ ಕಾರ್ಯಕರ್ತರಿಗೆ ಬಿಜೆಪಿಯವರಿಂದಲೇ ಹಲ್ಲೆ !

ಮುಡಿಪು ಪೇಟೆಯಲ್ಲಿ ಬಿಜೆಪಿ ಮುಖಂಡ, ಸಹಕಾರಿ ಧುರೀಣ ರಾಜಾರಾಮ ಭಟ್ ಬೆಂಬಲಿಗರ ರಂಪಾಟ

ಮಂಗಳೂರು ಸೆಪ್ಟೆಂಬರ್ 6: ಬಜರಂಗದಳ, ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತರಿಗೆ ಬಿಜೆಪಿ ಮುಖಂಡ ರಾಜಾರಾಮ ಭಟ್ ಬೆಂಬಲಿಗರು ಸೇರಿ ಹಲ್ಲೆ ನಡೆಸಿದ ಘಟನೆ ಕೊಣಾಜೆ ಬಳಿಯ ಮುಡಿಪಿನಲ್ಲಿ ನಡೆದಿದೆ.

ಆಗಸ್ಟ್‌ 24ರಂದು ರಾತ್ರಿ 12 ಗಂಟೆ ವೇಳೆಗೆ ಬಜರಂಗದಳ ಕಾರ್ಯಕರ್ತರಾದ ತುಳಸೀದಾಸ್ ಮತ್ತು ಜಯಪ್ರಕಾಶ್ ಎಂಬವರು ಮೊಸರು ಕುಡಿಕೆ ಉತ್ಸವ ಮುಗಿಸಿ ಹಿಂತಿರುಗುತ್ತಿದ್ದಾಗ ಮುಡಿಪು ಶಾಲೆಯ ಮೈದಾನದಲ್ಲಿ ನಿಂತಿದ್ದರು. ಗಣೇಶ ಹಬ್ಬದ ಟ್ಯಾಬ್ಲೋ ವಿಚಾರದಲ್ಲಿ ಮಾತನಾಡುತ್ತಿದ್ದಾಗ, ಅಲ್ಲಿಗೆ ಬಂದ ರಾಜೇಶ್ ಕೊಡಕ್ಕಲ್, ರತೀಶ್ ಶೆಟ್ಟಿ ಪಾವುಳ, ದೇವರಾಜ ಎಂಬವರು ಮುಡಿಪಿನಲ್ಲಿ “ನೀವು ಮಾತ್ರ ಹಿಂದುಗಳಾ, ರಾಜರಾಮ ಭಟ್ರ ವಿರುದ್ಧ ಭಾರೀ ಎಗರಾಡುತ್ತೀರಾ… ತುಳುವಿನಲ್ಲಿ ‘ರಂ.. ಮಗ, ಸೂ.. ಮಗ, ಭಟ್ರೆಗೆ ಬಾರೀ ತಾಂಟುವನಾ, ನಿನನ್ ಇನಿ ಕೆರಂದೆ ಬುಡ್ಪುಜಿ…’ ಅಂತಾ ಹೇಳುತ್ತಾ ತಲವಾರು ಬೀಸುತ್ತಾ ಮುಂದೆ ಬಂದಿದ್ದು ತುಳಸಿದಾಸ್ ತಪ್ಪಿಸಿಕೊಂಡಿದ್ದರಿಂದ ಕೈಗೆ ಮತ್ತು ಬೆನ್ನಿಗೆ ತಲವಾರು ಏಟು ಬಿದ್ದು ಗಾಯಗೊಂಡಿದ್ದಾರೆ. ಜೊತೆಗಿದ್ದ ಜಯಪ್ರಕಾಶ್ ಜಗಳ ಬಿಡಿಸಲು ಬಂದಿದ್ದು ಆತನ ಕಿಬ್ಬೊಟ್ಟೆಗೆ ಕತ್ತಿಯೇಟು ಬಿದ್ದು ತೀವ್ರ ಗಾಯಗೊಂಡಿದ್ದಾರೆ. ಬಳಿಕ ಅವರು ಜೀವ ಭಯದಲ್ಲಿ ಬೊಬ್ಬೆ ಹಾಕಿದ್ದು, ಸ್ಥಳೀಯ ಯುವಕರು ಸೇರಿದಾಗ, ನಿಮ್ಮನ್ನು ಮುಂದೆ ನೋಡಿಕೊಳ್ಳುತ್ತೇನೆಂದು ಹೇಳಿ ಪರಾರಿಯಾಗಿದ್ದಾರೆ‌. ಬಳಿಕ ಗಾಯಗೊಂಡ ತುಳಸಿದಾಸ್ ಮತ್ತು ಜಯಪ್ರಕಾಶ್ ಅವರನ್ನು ಸ್ಥಳೀಯರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಕರಣ ತಿರುಚಿದ ಕೊಣಾಜೆ ಪೊಲೀಸರು !

ಆಸ್ಪತ್ರೆಗೆ ರಾತ್ರಿಯೇ ಆಗಮಿಸಿದ್ದ ಕೊಣಾಜೆ ಪೊಲೀಸರು ಗಾಯಾಳುಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಆದರೆ, ಮರುದಿನ ಎಫ್ಐಆರ್ ದಾಖಲಾದ ಸಂದರ್ಭದಲ್ಲಿ ತಮ್ಮ ಹೇಳಿಕೆಯನ್ನು ಪೊಲೀಸರು ತಿರುಚಿದ್ದಾರೆಂದು ತುಳಸಿದಾಸ್ ಮಂಗಳೂರು ನಗರ ಕಮಿಷನರ್ ಪಿ.ಎಸ್ ಹರ್ಷಾಗೆ ದೂರು ನೀಡಿದ್ದಾರೆ. ರಾಜಾರಾಮ ಭಟ್ಟರ ಒತ್ತಡಕ್ಕೆ ಮಣಿದು ಕೋಣಾಜೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಲ್ಲ. ತಮ್ಮ ವಿರುದ್ಧವೇ ಪಿತೂರಿ ನಡೆಸಿದ್ದಾರೆ. ನನ್ನ ಸಹಿಯನ್ನು ಪೋರ್ಜರಿ ಮಾಡಿ ಬೇರೆಯೇ ಕಂಪ್ಲೇಂಟ್ ಬರೆದುಕೊಂಡಿದ್ದಾರೆ ಎಂದು ತುಳಸಿದಾಸ್ ಕಮಿಷನರ್ ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಗಲಾಟೆ ಯಾಕೆ…

ಮುಡಿಪು ಪೇಟೆಯಲ್ಲಿ ಕಳೆದ ಹತ್ತು ವರ್ಷಗಳಿಂದಲೂ ರಾಜಾರಾಮ ಭಟ್ ಮತ್ತು ಬಿಜೆಪಿ ಪ್ರಮುಖರು ಹಾಗೂ ಸ್ಥಳೀಯ ವಿಹಿಂಪ, ಬಜರಂಗದಳ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ರಾಜಾರಾಮ ಭಟ್ ಮತ್ತು ಸಂತೋಷ್ ರೈ ಬೋಳ್ಯಾರ್ ಬಗ್ಗೆ ಬಜರಂಗದಳ ಕಾರ್ಯಕರ್ತರಿಗೆ ಅಸಮಾಧಾನ ಇದೆ. ಬಜರಂಗದಳ ಕಾರ್ಯಕರ್ತರು ಯಕ್ಷಗಾನ, ಗಣೇಶ ಹಬ್ಬ ಮಾಡುತ್ತಾ ಬಂದಿದ್ದರೂ, ಅದನ್ನು ವಿಫಲಗೊಳಿಸಲು ಇವರಿಬ್ಬರು ಪ್ರಯತ್ನಿಸುತ್ತಿದ್ದರು. ಇದರಿಂದ ಸ್ಥಳೀಯವಾಗಿ ಎರಡು ಬಣ ಸೃಷ್ಟಿಯಾಗಿದ್ದು , ರಾಜಾರಾಮ ಭಟ್ ಮತ್ತು ಸಂತೋಷ್ ರೈ ವಿಹಿಂಪಕ್ಕೆ ಪರ್ಯಾಯವಾಗಿ ಧರ್ಮ ಜಾಗೃತಿ ಎಂಬ ಸಂಘಟನೆ ಕಟ್ಟಿಕೊಂಡಿದ್ದಾರೆ. ತಮ್ಮ ಕೆಲವು ಬಿಜೆಪಿ ಮರಿ ಪುಢಾರಿಗಳನ್ನು ಸೇರಿಸಿಕೊಂಡು ಬೇರೆಯದ್ದೇ ತಂಡ ಕಟ್ಟಿಕೊಂಡಿದ್ದು ಉಭಯ ತಂಡಗಳ ಮಧ್ಯೆ ವೈರತ್ವ ಬೆಳೆಯಲು ಕಾರಣವಾಗಿದೆ. ಈ ವೈಷಮ್ಯದಿಂದಾಗಿ ಆಗಾಗ ಎರಡು ಕಡೆಯ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಲೇ ಬಂದಿದೆ.

ಸಹಕಾರ ಭಾರತಿಯಿಂದ ವಜಾ ಆಗಿದ್ದ ರಾಜಾರಾಮ

ರಾಜಾರಾಮ ಭಟ್ ಮುಡಿಪು, ಉಳ್ಳಾಲ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಬಿಜೆಪಿ ಮುಖಂಡರಾಗಿ ಕಾಣಿಸಿಕೊಂಡರೂ, ಅಂತರಂಗದಲ್ಲಿ ಕಾಂಗ್ರೆಸಿಗ. ಹಿಂದೆ ಕಾಂಗ್ರೆಸಿಗರೇ ಆಗಿದ್ದ ಭಟ್, ಕೆಲವು ವರ್ಷಗಳಿಂದ ಸಂಘ ಪರಿವಾರದ ಸಹಕಾರ ಭಾರತಿಯಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಎಸ್ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಜಾರಾಮ ಭಟ್ಟರು ಸಹಕಾರ ಭಾರತಿ ಅಭ್ಯರ್ಥಿಗಳ ವಿರುದ್ಧವೇ ಸ್ಪರ್ಧೆ ಮಾಡಿದ್ದರು. ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಬಳಗದಿಂದ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿ, ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದರು. ಆದರೆ, ಈ ವಿಚಾರ ಸ್ಥಳೀಯವಾಗಿ ಸಹಕಾರ ಭಾರತಿ ಮತ್ತು ಸಂಘ ಪರಿವಾರದ ಕಾರ್ಯಕರ್ತ ರಲ್ಲಿ ಆಕ್ರೋಶ ಮೂಡಿಸಿತ್ತು. ಬಳಿಕ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸಂಘದ ಪ್ರಮುಖರು ರಾಜಾರಾಮ ಭಟ್ಟರನ್ನು ಸಹಕಾರ ಭಾರತಿಯಿಂದ ವಜಾಗೊಳಿಸಿದ್ದರು. ಆದರೆ, ಭಟ್ ಆರೆಸ್ಸೆಸ್ ಪ್ರಮುಖರ ನಿರ್ಧಾರಕ್ಕೆ ಸಡ್ಡು ಹೊಡೆದು ಸ್ಥಳೀಯವಾಗಿ ಬಿಜೆಪಿ ನಾಯಕರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಬಿಜೆಪಿ ಸಭೆಗಳಲ್ಲಿ ತನ್ನದೇ ಕಾರ್ಯಭಾರ ನಡೆಯುವಂತೆ ನೋಡಿಕೊಂಡಿದ್ದಾರೆ. ಇದೀಗ ಸ್ಥಳೀಯವಾಗಿ ಹಿಂದುಗಳ ಒಗ್ಗಟ್ಟು ಮುರಿದು, ಸಂಘರ್ಷಕ್ಕೆ ತುಪ್ಪ ಸುರಿಯುತ್ತಿದ್ದಾರೆಂದು ಕಾರ್ಯಕರ್ತರು ಆರೋಪಿಸುತ್ತಾರೆ.

ಗೋವಿನ ಹೆಸರಲ್ಲಿ ನಾಟಕವಾಡಿದ್ದ ಭಟ್ಟ

ಒಂದು ವರ್ಷದ ಹಿಂದೆ ಕೈರಂಗಳದಲ್ಲಿ ಗೋವುಗಳ ಕಳ್ಳತನ ಹೆಸರಲ್ಲಿ ಉಪವಾಸ ಮಾಡಿದ್ದ ರಾಜಾರಾಮ ಭಟ್, ಆಮೂಲಕ ಬಿಜೆಪಿ, ಪರಿವಾರದ ಮಧ್ಯೆ ಮೈಲೇಜ್ ಪಡೆಯುವ ಯತ್ನ ಮಾಡಿದ್ದರು. ಇದೀಗ ಹಿಂದುಗಳ ನಡುವೆಯೇ ವೈಷಮ್ಯಕ್ಕೆ ಕಾರಣವಾಗುತ್ತಿದ್ದಾರೆಂದು ಸ್ಥಳೀಯ ಕಾರ್ಯಕರ್ತರು ಆರೋಪಿಸುತ್ತಾರೆ.

ತಲವಾರಿನಲ್ಲಿ ಹಲ್ಲೆಯಾದ್ರೂ ಕೊಲೆಯತ್ನ ಕೇಸು ಯಾಕಿಲ್ಲ ?

ಪ್ರಕರಣ ಸಂಬಂಧ ಕೊಣಾಜೆ ಠಾಣೆಯಲ್ಲಿ ರಾಜೇಶ್ ಕೊಡಕ್ಕಲ್, ರತೀಶ ಶೆಟ್ಟಿ ಪಾವುಳ, ದೇವರಾಜು ಮತ್ತು ರಾಜಾರಾಮ ಭಟ್ ವಿರುದ್ಧ ಕೇಸು ದಾಖಲಾಗಿದೆ. ಆದರೆ, ತಲವಾರಿನಲ್ಲಿ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದರೂ, ಕೊಣಾಜೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಲ್ಲ. ಮಾಮೂಲಿ ಕೇಸು ದಾಖಲಿಸಿ, ಕಣ್ಣೊರೆಸುವ ನಾಟಕವಾಡಿದ್ದಾರೆಂದು ತುಳಸಿದಾಸ್ ಆರೋಪಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *