LATEST NEWS
ಆರೋಪಿಯನ್ನು ಬಂಧಿಸಲು ಹೋದಾಗ ಪೊಲೀಸರಿಗೆ ಚೂರಿ ಇರಿತ : ಆಸ್ಪತ್ರೆಗೆ ದಾಖಲಾದ ಮುಲ್ಕಿ ಎಎಸ್‌ಐ..!

ಮಂಗಳೂರು : ಎರಡು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲು ಮನೆಗೆ ಹೋದಾಗ ಮನೆಯವರು ಮತ್ತು ಪ್ರಕರಣದ ಆರೋಪಿ ಪೊಲೀಸರ ಮೇಲೆಯೇ ದಾಳಿ ನಡೆಸಿದ ಘಟನೆ ಮಂಗಳೂರಿನ ಮುಲ್ಕಿ ಸಮೀಪದ ಕೆಎಸ್ ರಾವ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ದಾಳಿಯಲ್ಲಿ ಗಾಯಗೊಂಡ ಎ ಎಸ್ ಐ ಆಶೋಕ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಲ್ಕಿ ಪೊಲೀಸರಿಗೆ ಎರಡು ಪ್ರಕರಣದಲ್ಲಿ ಬೇಕಾಗಿದ್ದ ಕೆಎಸ್ ರಾವ್ ನಗರ ನಿವಾಸಿ ಅನ್ಸಾರ್(20) ಎಂಬಾತನ ಮಾಹಿತಿ ಪಡೆದು ನೋಟಿಸ್ ಜಾರಿ ಮಾಡಲು ಆರೋಪಿಯ ಸಂಬಂಧಿಕರ ಮನೆಗೆ ಹೋಗುತ್ತಿದ್ದಂತೆ ಆರೋಪಿಯ ಸಂಬಂಧಿಕರ ಮನೆಯವರು ಬಾಗಿಲು ಮುಚ್ಚಿದ್ದರು ಎನ್ನಲಾಗಿದೆ.
ಈ ಸಂದರ್ಭ ಮುಲ್ಕಿ ಪೊಲೀಸರು ಅನೇಕ ಸೂಚನೆಗಳನ್ನು ನೀಡಿದರೂ ಮನೆಯವರು ಬಾಗಿಲು ತೆರೆಯದ ಕಾರಣ ಪೊಲೀಸರು ಬಾಗಿಲು ಒಡೆದು ಒಳ ನುಗ್ಗಿದರೆನ್ನಲಾಗಿದ್ದು, ಈ ಸಂದರ್ಭ ಮನೆಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೊಂದಿಗೆ ಘರ್ಷಣೆ ನಡೆದಿದೆ.
ಈ ಸಂಧರ್ಭ ಆರೋಪಿ ಕತ್ತಿಯಿಂದ ಮುಲ್ಕಿ ಎಎಸ್ಐ ಅಶೋಕ ಅವರಿಗೆ ಹಲ್ಲೆ ನಡೆಸಿದ್ದಾನೆ. ಆಶೋಕ್ ಅವರು ಆಸ್ಪತ್ರೆಗೆ ದಾಖಲಾಗಿದ್ದು ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭ ಆರೋಪಿ ಅನ್ಸಾರ್ ಕೂಡ ಗಾಯಗೊಂಡಿದ್ದು ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯ ಒಳಗೆ ಆರೋಪಿಗಳಾದ ಅನ್ಸಾರ್, ಸಾದಿಕ್, ಮತ್ತಿಬ್ಬರು ಮಹಿಳೆಯರು ಸೇರಿ ತನ್ನ ಕುತ್ತಿಗೆ ಹಿಡಿದು ಕತ್ತಿಯಿಂದ ಕೈಗೆ ಹಲ್ಲೆ ನಡೆಸಿದ್ದು ಅವಾಚ್ಯ ಶಬ್ದಗಳಿಂದ ಮುಲ್ಕಿ ಎಎಸ್ಐ ಹಾಗೂ ಇನ್ಸ್ ಪೆಕ್ಟರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಎಎಸ್ಐ ಅಶೋಕ್ ಮುಲ್ಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಪೊಲೀಸರು ಏಕಾಏಕಿ ಬಾಗಿಲು ಒಡೆದು ಮನೆಯೊಳಗೆ ನುಗ್ಗಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.
ಪಣಂಬೂರು ಎಸಿಪಿ ಮಹೇಶ್ ಕುಮಾರ್, ಇನ್ಸ್ ಪೆಕ್ಟರ್ ಅಝ್ಮತ್ ಆಲಿ, ಸುರತ್ಕಲ್ ಇನ್ಸ್ ಪೆಕ್ಟರ್ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.