LATEST NEWS
ವೈದ್ಯಕೀಯ ಜಗತ್ತಿನ ಅದ್ಬುತ ಯುವಕನ ತೋಳು ಯುವತಿಗೆ ಜೋಡಣೆ
ವೈದ್ಯಕೀಯ ಜಗತ್ತಿನ ಅದ್ಬುತ ಯುವಕನ ತೋಳು ಯುವತಿಗೆ ಜೋಡಣೆ
ಕೊಚ್ಚಿ ಸೆಪ್ಟೆಂಬರ್ 30: ಇಡೀ ದೇಶವೇ ಹೆಮ್ಮೆ ಪಡುವಂತ ಕೆಲಸವನ್ನು ಇಡೀ ಏಷ್ಯಾದಲ್ಲೇ ಮೊದಲ ಬಾರಿಗೆ ಭಾರತದ ವೈದ್ಯರು ಮಾಡಿ ತೋರಿಸಿದ್ದಾರೆ. ಕಳೆದ ವರ್ಷ ರಸ್ತೆ ಅಪಘಾತ ಸಂಭವಿಸಿ ಮಣಿಪಾಲದ 19 ವರ್ಷದ ಎಂಜಿನಿಯರ್ ವಿದ್ಯಾರ್ಥಿನಿ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಳು. ನಂತರ ಕೇರಳದ ಕೊಚ್ಚಿಯ ಅಮೃತಾ ವೈದ್ಯ ವಿಜ್ಞಾನ ಸಂಸ್ಥೆಯ ವೈದ್ಯರು ಆಪರೇಷನ್ ಮಾಡಿ ಯುವಕನ ತೋಳನ್ನು ಕಸಿ ಮಾಡಿ ಜೋಡಿಸಿದ್ದಾರೆ.
ಇದು ಇಡೀ ಏಷ್ಯವೇ ಹೆಮ್ಮೆ ಪಡುವ ಸಂಗತಿಯಾಗಿದ್ದು, ವಿಶ್ವದಲ್ಲಿ ಇಂತಹ 9 ಕಸಿಗಳು ನಡೆದಿವೆ. ಆದರೆ ಇದೇ ಮೊದಲ ಬಾರಿಗೆ ಏಷ್ಯಾದಲ್ಲಿ ಮಾಡಿರುವ ಆಪರೇಷನ್ ಇದಾಗಿದೆ. ಅದರಲ್ಲೂ ಹುಡುಗನ ತೋಳುಗಳನ್ನು ಇದೇ ಪ್ರಥಮ ಬಾರಿಗೆ ಯುವತಿಗೆ ಜೋಡಿಸಲಾಗಿದೆ.
ಪ್ಲಾಸ್ಟಿಕ್ ಮತ್ತು ಪುನಃ ನಿರ್ಮಾಣದ ಸರ್ಜರಿ ಇಲಾಖೆಯ ಮುಖ್ಯಸ್ಥರಾದ ಡಾ. ಸುಬ್ರಹ್ಮಣ್ಯ ಅಯ್ಯರ್ ನೇತೃತ್ವದಲ್ಲಿ ಸುಮಾರು 20 ವೈದ್ಯರು ಮತ್ತು 16 ಅರವಳಿಕೆ ತಜ್ಞರು ಸೇರಿ ಸುಮಾರು 13 ಗಂಟೆಗಳ ಕಾಲ ಈ ಆಪರೇಷನ್ ಮಾಡಿದ್ದಾರೆ.
ಘಟನೆ ವಿವರ
ಪುಣೆಯ ಟಾಟಾ ಮೋಟರ್ಸ್ ಕಂಪೆನಿಯ ಹಿರಿಯ ವ್ಯವಸ್ಥಾಪಕರಾದ ಫಕೀರಗೌಡ ಮತ್ತು ಸುಮಾ ನುಗ್ಗಿಹಳ್ಳಿ ದಂಪತಿಯ ಪುತ್ರಿ ಶ್ರೇಯಾ ಸಿದ್ದನಗೌಡ ಮಣಿಪಾಲ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಮಿಕಲ್ ಎಂಜಿನಿಯರ್ ವ್ಯಾಸಂಗ ಮಾಡುತ್ತಿದ್ದಳು. ಒಮ್ಮೆ ಪುಣೆಯಿಂದ ಮಣಿಪಾಲಕ್ಕೆ ಬಸ್‍ನಲ್ಲಿ ಬರುತ್ತಿದ್ದಾಗ ಬಸ್ ಅಪಘಾತಕ್ಕೆ ಒಳಗಾಗಿತ್ತು. ಈ ಸಂದರ್ಭದಲ್ಲಿ ಶ್ರೇಯಾ ಬಸ್ ಕೆಳಗಡೆ ಸಿಲುಕೊಂಡಿದ್ದು, ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಳು.
ಕೈ ದಾನ ಮಾಡಿದ ವ್ಯಕ್ತಿ ಯಾರು ?
ಶ್ರೇಯಾಗೆ ಕೈಗಳನ್ನು ದಾನ ಮಾಡಿದ ವ್ಯಕ್ತಿ ಸಚಿನ್ (20). ಎರ್ನಾಕುಲಂನ ರಾಜಗಿರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸಚಿನ್ ರಸ್ತೆ ಅಪಘಾತ ಉಂಟಾಗಿ ತೀವ್ರವಾಗಿ ಗಾಯಗೊಂಡಿದ್ದ. ಈತನ ಬ್ರೈನ್ ಡೆಡ್ ಆಗಿದ್ದ ಕಾರಣ ಸಚಿನ್ ಪೋಷಕರು ಕೈಗಳನ್ನು ದಾನ ಮಾಡಲು ಅನುಮತಿ ನೀಡಿದ್ದರು. ಅನುಮತಿ ಸಿಕ್ಕಿದ ಕಾರಣ ಆತನ ತೋಳುಗಳನ್ನೇ ಶ್ರೇಯಾಗೆ ಈಗ ಯಶಸ್ವಿಯಾಗಿ ಜೋಡಿಸಲಾಗಿದೆ.
ಶ್ರೇಯಾಳ ದೇಹವು ಕಸಿ ಮಾಡಿದ ಕೈಗಳನ್ನು ಒಪ್ಪಿಕೊಂಡಿವೆ. ಅಷ್ಟೇ ಅಲ್ಲದೇ ಉತ್ತಮ ಚೇತರಿಕೆ ಲಕ್ಷಣಗಳು ಕಂಡುಬರುತ್ತಿವೆ. ಪ್ರಸ್ತುತ ಶ್ರೇಯಾಳ ಬೆರಳುಗಳು, ಮಣಿಕಟ್ಟುಗಳು ಹಾಗೂ ಭುಜಗಳು ಚಲನೆಯಾಗುತ್ತಿವೆ. ಮುಂದಿನ ಒಂದುವರೆ ವರ್ಷದಲ್ಲಿ ಶೇ.85 ರಷ್ಟು ಚಲನೆಯನ್ನು ಕಾಣಬಹುದು ಎಂದು ವೈದ್ಯರು ಹೇಳಿದ್ದಾರೆ.
ಮುಂದಿನ ವರ್ಷ ನಾನು ಎಲ್ಲರಂತೆ ಸಾಮಾನ್ಯ ಜೀವನ ನಡೆಸುತ್ತೇನೆ ಎಂಬ ಭರವಸೆ ಇದೆ ಎಂದು ಶ್ರೇಯಾ ಸಂತಸ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅಮೃತಾ ಇನ್ಸ್ ಟಿಟ್ಯೂಟ್ ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡಿ ಯಶಸ್ವಿಯಾಗಿದೆ.