LATEST NEWS
ತುಳು ಅಧಿಕೃತ ಭಾಷೆಗಾಗಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆ

ಮಂಗಳೂರು ಅಕ್ಟೋಬರ್ 31 : ರಾಜ್ಯದಲ್ಲಿ ತುಳುವನ್ನು ಅಧಿಕೃತ ಭಾಷೆಯಾಗಿ ಪರಿಗಣಿಸುವಂತೆ ಸರಕಾರವನ್ನು ಒತ್ತಾಯಿಸಲು ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಮಂಗಳೂರಗಿನಲ್ಲಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವುದರ ಹಿಂದೆ ರಾಜ್ಯದಲ್ಲಿ ಕನ್ನಡದ ಜೊತೆಗೆ ತುಳುವನ್ನು ಹೆಚ್ಚುವರಿಯಾಗಿ ಅಧಿಕೃತ ಭಾಷೆ ಎಂದು ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಹಾಗೂ ತುಳು ಭವನಕ್ಕೆ ಸರ್ಕಾರದಿಂದ ಜಾಗವನ್ನು ಪಡೆಯುವುದು ಬೆಂಗಳೂರಿನಲ್ಲಿ ನ.25 ಮತ್ತು ನ.26ರಂದು ಕಂಬಳ ಆಯೋಜಿಸುವ ಉದ್ದೇಶಗಳಲ್ಲೊಂದು ಎಂದರು.

ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಒಂದು ಇಲಾಖೆ ನಿರಾಕ್ಷೇಪಣ ಪತ್ರ ನೀಡಿದೆ. ನಾಲ್ಕು ಇಲಾಖೆಗಳಿಂದ ಇನ್ನಷ್ಟೇ ಸಿಗಬೇಕಿದೆ. ಗೃಹ ಇಲಾಖೆ ಹಾಗೂ ಕಾನೂನು ಇಲಾಖೆಗಳೂ ಈ ಪ್ರಸ್ತಾವಕ್ಕೆ ಪೂರಕ ಅಭಿಪ್ರಾಯ ನೀಡಬೇಕಿದೆ’ ಎಂದರು. ಕರಾವಳಿಯಲ್ಲಿ ಗರಿಷ್ಠ 147 ಮೀ ಉದ್ದದ ಕಂಬಳದ ಕರೆ ಇದೆ. ಬೆಂಗಳೂರು ಕಂಬಳ ದಾಖಲೆ ಆಗಬೇಕೆಂಬ ಕಾರಣಕ್ಕೆ ಕರೆಯ ಉದ್ದ ಇದಕ್ಕಿಂತ ಹೆಚ್ಚು (155 ಮೀ) ಇಟ್ಟಿದ್ದೇವೆ. ಮೊದಲ ಸ್ಥಾನ ಪಡೆದವರಿಗೆ ₹ 1.5 ಲಕ್ಷ ನೀಡುತ್ತೇವೆ. ಕೋಣಗಳ ಯಜಮಾನರಿಗೆ ಎರಡು ಪವನ್ (16 ಗ್ರಾಂ) ಚಿನ್ನ, ಕೋಣಗಳಿಗೆ ಶೀಲ್ಡ್, ಓಡಿಸುವವರಿಗೆ ಚಿನ್ನದ ಪದಕ ಮತ್ತು 5 ಸಾವಿರ ಹಣ ನೀಡುವುದು ಕಂಬಳದ ಇತಿಹಾಸದಲ್ಲಿ ಮೊದಲು’ ಎಂದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಈ ಕಂಬಳದಲ್ಲಿ 125 ಜೋಡಿ ಕೋಣಗಳಾದರೂ ಭಾಗವಹಿಸಬೇಕೆಂಬ ಅಪೇಕ್ಷೆ ನಮ್ಮದು. 116 ಯಜಮಾನರು ಇದುವರೆಗೆ ನೋಂದಣಿ ಮಾಡಿದ್ದಾರೆ. ಕರೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು ವೀಕ್ಷಿಸಲು ನಿತ್ಯ ಒಂದೂವರೆ ಸಾವಿರದಷ್ಟು ಜನ ಬರುತ್ತಿದ್ದಾರೆ’ ಎಂದರು.