DAKSHINA KANNADA
ಕಾರ್ಕಳ ಪತ್ರಕರ್ತ ಶೇಖರ್ ಅಜೆಕಾರ್ ಹೃದಯಾಘಾತಕ್ಕೆ ಬಲಿ..!
ಕಾರ್ಕಳ : ಹಿರಿಯ ಪತ್ರಕರ್ತ, ಸಾಹಿತಿ ಶೇಖರ್ ಅಜೆಕಾರು (54) ಅವರು ಅ. 31ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮಂಗಳವಾರ ಬೆಳಿಗ್ಗೆ ಕಾರ್ಕಳ ಅಜೆಕಾರಿನ ತನ್ನ ಮನೆಯಲ್ಲಿ ಕುಸಿದು ಬಿದ್ದ ಶೇಖರ್ ಅವರನ್ನು ತಕ್ಷಣ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿಯಾದ್ರೂ ಆ ವೇಳೆಗಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕವಿಗೋಷ್ಟಿಯಂಥ ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಗಮನ ಸೆಳೆದಿದ್ದ ಶೇಖರ ಅಜೆಕಾರು ಮುಂಬಯಿಯಲ್ಲಿ ಪತ್ರಿಕೋದ್ಯಮ ಪ್ರಾರಂಭಿಸಿದವರು. ಮುಂಬಯಿಯ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದ ಅವರು ಬಳಿಕ ಮಂಗಳೂರಿನ ಜನವಾಹಿನಿಗೆ ಸೇರಿದ್ದರು. ಅನಂತರ ಕನ್ನಡ ಪ್ರಭ ಸಹಿತ ಕೆಲವು ಪತ್ರಿಕೆಗಳಿಗೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಇತ್ತೇಚೆಗಿನ ಕೆಲವು ವರ್ಷಗಳಿಂದ ಪತ್ರಿಕೋದ್ಯಮ ಬಿಟ್ಟು ಪೂರ್ಣವಾಗಿ ಸಾಹಿತ್ಯ ಮತ್ತು ಸಂಘಟನೆಯ ಕೆಲಸಗಳಲ್ಲಿ ತೊಡಗಿದ್ದರು.
ಹಲವಾರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದ ಶೇಖರ್ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಅವಾರ್ಡ್ 2018, ಕೃಷಿ ಬಂಧು 2019, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2019, ವಿಶ್ವ ದರ್ಶನ ಸಾಹಿತ್ಯ ಪ್ರಶಸ್ತಿ 2019, ಶಿಖಾ ಭಾರತ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.