UDUPI
ಮಧ್ಯರಾತ್ರಿ 18 ಕಿಲೋ ಮೀಟರ್ ಆಟೋ ಚಲಾಯಿಸಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿದ ಆಶಾ ಕಾರ್ಯಕರ್ತೆ
ಉಡುಪಿ : ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯನ್ನು ಸ್ವತಃ ಆಟೋ ಚಲಾಯಿಸಿಕೊಂಡು ಆಸ್ಪತ್ರೆ ಸೇರಿಸಿ ಆಶಾ ಕಾರ್ಯಕರ್ತೆಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಮಧ್ಯರಾತ್ರಿಯಲ್ಲೂ ಆಟೋ ಚಲಾಯಿಸಿ ಗಟ್ಟಿತನ ಮೆರೆದಿರುವ ಆಶಾ ಕಾರ್ಯಕರ್ತೆಯ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಆಶಾ ಕಾರ್ಯಕರ್ತೆ ಹಾಗೂ ಆಟೊ ಚಾಲಕಿಯೂ ಆಗಿರುವ ರಾಜೀವಿ ಅವರು ಸೂಕ್ತ ಸಾರಿಗೆ ಸೌಲಭ್ಯಗಳಿಲ್ಲದ ಪೆರ್ಣಂಕಿಲ ಗ್ರಾಮದಿಂದ ಸುಮಾರು 18 ಕಿ.ಮೀ ದೂರದ ಉಡುಪಿ ನಗರದಲ್ಲಿರುವ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಗರ್ಭಿಣಿಯನ್ನು ಕರೆತಂದಿದ್ದಾರೆ.
ಮಧ್ಯರಾತ್ರಿ 3.15ರ ಸುಮಾರಿಗೆ ಪೆರ್ಣಂಕಿಲದ ಶ್ರೀಲತಾ ಎಂಬುವರು ಕರೆ ಮಾಡಿ ಹೆರಿಗೆ ನೋವು ಹೆಚ್ಚಾಗಿರುವ ವಿಚಾರ ತಿಳಿಸಿದರು. ತಕ್ಷಣ ಆಟೊ ತೆಗೆದುಕೊಂಡು ಅವರನ್ನು ಉಡುಪಿಯ ಬಿ.ಆರ್.ಶೆಟ್ಟಿ ಆಸ್ಪತ್ರೆಗೆ ದಾಖಲಿಸಿದೆ. ಗುರುವಾರ ಶ್ರೀಲತಾಗೆ ಹೆಣ್ಣುಮಗು ಜನಿಸಿದೆ. ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ರಾಜೀವಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಪೆರ್ಣಂಕಿಲ ಗ್ರಾಮದಲ್ಲಿ ಹಿಂದೆ ಬಸ್ ಸೌಲಭ್ಯಗಳು ಇರಲಿಲ್ಲ. ರಸ್ತೆಗಳು ಹದಗೆಟ್ಟು ಆಟೊ ಸಂಚರಿಸಲು ಮಾತ್ರ ಸಾಧ್ಯವಾಗುತ್ತಿತ್ತು. ಆಗ, ಹವ್ಯಾಸಕ್ಕಾಗಿ ಪತಿಯ ಸಹಕಾರದಿಂದ ಆಟೊ ಚಾಲನೆ ಮಾಡುವುದನ್ನು ಕಲಿತ್ದಿದ್ದು, ಮುಂದೆ ಇದೇ ಅವರ ವೃತ್ತಿ ಕುಟುಂಬಕ್ಕೆ ಆಧಾರವಾಯಿತು. 20 ವರ್ಷದಿಂದ ಆಟೊ ಓಡಿಸುತ್ತಿರುವ ರಾಜೀವಿ ಅವರ ಪತಿ 5 ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತರಾಗಿದ್ದರು. ಅವರ ಮಗಳ ಮದುವೆಯಾಗಿದ್ದು, ಮಗ ಕೆಲಸದಲ್ಲಿದ್ದಾನೆ. ಜೀವನ ನಿರ್ವಹಣೆಗೆ ಬೆಳಿಗ್ಗಿನಿಂದ ಮಧ್ಯಾಹ್ನದವರೆಗೂ ಆಶಾ ಕಾರ್ಯಕರ್ತೆಯಾಗಿ, ನಂತರ ರಾತ್ರಿವರೆಗೂ ಆಟೊ ಚಾಲಕಿಯಾಗಿ ದುಡಿಯುತ್ತಿದ್ದಾರೆ.