LATEST NEWS
ರಂಗಕ್ಕಿಳಿದ ವಾಯುಪಡೆ, ಯುದ್ಧ ಸಿದ್ಧತೆಯಲ್ಲಿ ಭಾರತ !?

ಪರಿಸ್ಥಿತಿ ಎದುರಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಎಂದ ರಾಜನಾಥ್
ನವದೆಹಲಿ, ಜೂನ್ 21 : ಜಮ್ಮು ಕಾಶ್ಮೀರದ ಲಡಾಖ್ ಮತ್ತು ಲೇಹ್ ಗಡಿಭಾಗದಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಯಾಗಿದೆ. ಅತ್ತ ಚೀನಾ ಪಡೆಗಳು ಭಾರತದ ಭೂಭಾಗ ಲಡಾಖ್ ಪ್ರಾಂತ್ಯದ ಗ್ಯಾಲ್ವಾನ್ ಕಣಿವೆ ಮತ್ತು ಪಾಂಗೊಂಗ್ ತ್ಸೊ ಪ್ರದೇಶದಲ್ಲಿ ಬೀಡು ಬಿಟ್ಟಿರುವುದರಿಂದ ಭಾರತೀಯ ವಾಯುಪಡೆ ಲಡಾಖ್ ಗಡಿಯಲ್ಲಿ ಯುದ್ಧ ವಿಮಾನಗಳನ್ನು ಜಮಾವಣೆ ಮಾಡಿದೆ.
ಇದೇ ವೇಳೆ, ಮೂರು ಸೇನಾ ಮುಖ್ಯಸ್ಥರ ಜೊತೆಗೆ ರಾಜನಾಥ್ ಸಿಂಗ್ ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಗಡಿಭಾಗದ ಯಾವುದೇ ಒತ್ತುವರಿ ಸನ್ನಿವೇಶಗಳನ್ನು ಎದುರಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದಾಗಿ ಹೇಳಿದ್ದಾರೆ. ಸಭೆಯಲ್ಲಿ ಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್, ಭೂಸೇನೆ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ, ನೌಕಾದಳ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್ ಬಧೌರಿಯಾ ಭಾಗವಹಿಸಿದ್ದರು.


ಗಡಿಯಲ್ಲಿ ಯುದ್ಧ ವಿಮಾನಗಳ ಹಾರಾಟ!
ವಾಯುಪಡೆಯ ಮಿಗ್ ಯುದ್ಧ ವಿಮಾನಗಳು, ಫೈಟರ್ ಜೆಟ್ ಗಳು, ಹೆಲಿಕಾಪ್ಟರ್ ಗಳು ಗಡಿಭಾಗದ ವಾಯುನೆಲೆಯಲ್ಲಿ ಹಾರಾಟ ನಡೆಸಲಾರಂಭಿಸಿವೆ. ಇದಕ್ಕೆ ಪೂರಕವಾಗಿ ಸೇನಾ ಬಂಕರ್ ಮತ್ತು ವಿಮಾನಗಳಿಗೆ ಬೇಕಾಗುವ ತೈಲದ ಪೂರೈಕೆಗೂ ಇನ್ನೊಂದೆಡೆ ಸಿದ್ಧತೆ ನಡೆದಿದೆ. ಜಮ್ಮು, ಜಲಂಧರ್ ಮತ್ತು ಸಂಗ್ರೂರ್ ತೈಲ ಸಂಗ್ರಹಣಾ ಕೇಂದ್ರಗಳಿಂದ ದಿನದಲ್ಲಿ ನೂರಕ್ಕೂ ಹೆಚ್ಚು ಟ್ಯಾಂಕರ್ ಗಳಲ್ಲಿ ತೈಲವನ್ನು ಗಡಿಭಾಗಕ್ಕೆ ಒಯ್ಯಲಾಗುತ್ತಿದೆ. ಡೀಸೆಲ್, ಜೆಟ್ ವಿಮಾನಗಳಿಗೆ ಬಳಸುವ ತೈಲ, ಪೆಟ್ರೋಲ್, ಸೀಮೆ ಎಣ್ಣೆಗಳನ್ನು ಗಡಿಪ್ರದೇಶದ ಲೇಹ್ ಮತ್ತು ಕಾರ್ಗಿಲ್ ಯುದ್ಧ ಭೂಮಿಗಳಲ್ಲಿ ಸಂಗ್ರಹಣೆ ಮಾಡಲಾಗುತ್ತಿದೆ ಎನ್ನುವ ವರದಿಗಳು ಬಂದಿವೆ.
ಇದೇ ವೇಳೆ, ವಾಯುಪಡೆಯ ಹೆಲಿಕಾಪ್ಟರ್ ಗಳಿಗೆ ಸುಲಭದಲ್ಲಿ ಪೆಟ್ರೋಲ್ ಪೂರೈಕೆ ಆಗುವಂತೆ ಗಡಿಭಾಗದ ಆಯಕಟ್ಟಿನ ಕೇಂದ್ರಗಳಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಕಳೆದ ಎಪ್ರಿಲ್ ತಿಂಗಳಿನಿಂದಲೇ ಹೀಗೆ ಗಡಿಭಾಗದ ಸಂಗ್ರಹಣಾ ಕೇಂದ್ರಗಳಲ್ಲಿ ತೈಲದ ಸಂಗ್ರಹಣೆ ಮಾಡಲಾಗುತ್ತಿದೆ. ಇನ್ನು ಮಾನ್ಸೂನ್ ಆವರಿಸಿದರೆ ಗಡಿಭಾಗಕ್ಕೆ ಟ್ಯಾಂಕರ್ ಗಳು ತೆರಳಲು ಕಷ್ಟವಾಗಬಹುದು ಅನ್ನುವ ಉದ್ದೇಶದಿಂದ ತೈಲವನ್ನು ಕೂಡಿಡಲಾಗುತ್ತಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಮಳೆಗಾಲ ಆವರಿಸಿದ ಬಳಿಕ ಯುದ್ಧ ಸನ್ನಿವೇಶ ಸೃಷ್ಟಿಯಾದರೆ ಅಂಥ ಪರಿಸ್ಥಿತಿ ಎದುರಿಸಲು ಸೇನಾ ಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ನಿನ್ನೆಯಷ್ಟೇ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಬಧೌರಿಯಾ, ಗಡಿಭಾಗದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ವಾಯುಪಡೆ ಸಜ್ಜಾಗಿದೆ ಅನ್ನುವ ಸುಳಿವು ನೀಡಿದ್ದರು. ಚೀನಾ ಪಡೆಗಳು ಮೇ ತಿಂಗಳಿನಿಂದಲೇ ಗಡಿಯಲ್ಲಿ ಸೇನೆ ಜಮಾವಣೆ ಮಾಡಿಕೊಂಡಿದ್ದು, ಅದಕ್ಕೆ ತಕ್ಕುದಾಗಿ ನಾವು ಕೂಡ ತಯಾರಿ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದರು. ಇದಲ್ಲದೆ, ಪ್ರಧಾನಿ ಮೋದಿ, ಗಡಿಭಾಗದ ರಕ್ಷಣೆಯ ವಿಚಾರದಲ್ಲಿ ಸೇನಾಪಡೆಗೆ ಪೂರ್ತಿ ಅಧಿಕಾರವನ್ನು ಕೊಡಲಾಗಿದೆ ಎಂದಿದ್ದರು. ಇವೆಲ್ಲ ಯುದ್ಧ ಸಿದ್ಧತೆ ಆಗುತ್ತಿರುವಾಗಲೇ ಚೀನಾ ಮತ್ತು ಭಾರತದ ಮೇಜರ್ ಜನರಲ್ ಮಟ್ಟದ ಅಧಿಕಾರಿಗಳು ಸೌಹಾರ್ದ ಇತ್ಯರ್ಥಕ್ಕೆ ಗಡಿಯಲ್ಲಿ ಮಾತುಕತೆಯನ್ನೂ ನಡೆಸುತ್ತಿದ್ದಾರೆ.
1962ರ ಯುದ್ಧದ ಬಳಿಕ ಜಮ್ಮು ಕಾಶ್ಮೀರದ ಅಕ್ಸಾಯ್ ಚಿನ್ ಭಾಗವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಚೀನಾ, ಈಗ ಮತ್ತಷ್ಟು ಮುಂದೆ ಬಂದು ಅಧಿಕಾರ ಸ್ಥಾಪನೆ ಮಾಡಲು ಹೊರಟಿದೆ. ಲಡಾಖ್, ಲೇಹ್ ಪ್ರಾಂತದ ಗ್ಯಾಲ್ವಾನ್ ಕಣಿವೆಯ ಎರಡು ಕಿಮೀ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಿಸುತ್ತಿರುವುದು ಭಾರತದ ಆಕ್ಷೇಪಕ್ಕೆ ಕಾರಣ. ಭಾರತ ವಿರೋಧ ವ್ಯಕ್ತಪಡಿಸಿದ್ದರೂ, ಚೀನಾದ ವಿದೇಶಾಂಗ ಸಚಿವ ಮಾತ್ರ ಗ್ಯಾಲ್ವಾನ್ ಕಣಿವೆ ತಮ್ಮದೆಂದು ಹೇಳಿಕೊಂಡಿರುವುದು ಯುದ್ಧ ಸನ್ನಿವೇಶ ಸೃಷ್ಟಿಸಿದೆ.