LATEST NEWS
ಕನ್ನಡ ಮಾಧ್ಯಮ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಕ: ಕನ್ನಡ ಶಿಕ್ಷಕರನ್ನು ನೇಮಿಸುವಂತೆ ಕೇರಳ ಸರಕಾರಕ್ಕೆ ಆದೇಶಿಸಿದ ಹೈಕೋರ್ಟ್
ಕಾಸರಗೋಡು, ಆಗಸ್ಟ್ 24: ಕನ್ನಡ ಮಾಧ್ಯಮ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಕ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಗೆಲುವು ದೊರೆತಿದೆ. ಶಾಲೆಗೆ ಕನ್ನಡ ತಿಳಿದಿರುವ ಶಿಕ್ಷಕನನ್ನು ನೇಮಿಸುವಂತೆ ಕೇರಳ ಸರಕಾರಕ್ಕೆ ಕೇರಳ ಹೈಕೋರ್ಟ್ ಆದೇಶಿಸಿದೆ.
ಕೇರಳದ ಕಾಸರಗೋಡಿನ ಅಡೂರು ಸರಕಾರಿ ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯಕ್ಕೆ ಕನ್ನಡ ಬಾರದ ಮಲಯಾಳಿ ಶಿಕ್ಷಕಿಯನ್ನು ಕೇರಳ ಶಿಕ್ಷಣ ಇಲಾಖೆ ನೇಮಿಸಿತ್ತು, ಮಲಯಾಳಂ ಭಾಷೆಯಲ್ಲೇ ಸಮಾಜ ವಿಜ್ಞಾನ ವಿಷಯವನ್ನು ಶಿಕ್ಷಕಿ ಭೋಧಿಸುತ್ತಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಲಯಾಳಂ ತಿಳಿಯದ ಕನ್ನಡ ವಿದ್ಯಾರ್ಥಿಗಳು ಪೋಷಕರೊಂದಿಗೆ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಮಣಿಯದ ಇಲಾಖೆ ವಿರುದ್ಧ ವಿದ್ಯಾರ್ಥಿಗಳು ನ್ಯಾಯಾಂಗದ ಮೊರೆ ಹೋಗ ಬೇಕಾಗಿ ಬಂತು.
14 ವಿದ್ಯಾರ್ಥಿಗಳಿಂದ ಹೈಕೋರ್ಟ್ ನಲ್ಲಿ ರಿಟ್ ಪಿಟೀಶನ್ ಹಾಕಿದ್ದು, ವಿಧ್ಯಾರ್ಥಿಗಳ ಮನವಿ ಹಿನ್ನಲೆಯಲ್ಲಿ ಶಾಲೆಗೆ ತೆರಳಿದ ತಜ್ಞರ ತಂಡ ತನಿಖೆ ನಡೆಸಿದೆ. ತನಿಖೆಯಲ್ಲಿ ಹೊಸದಾಗಿ ನೇಮಕಗೊಂಡ ಶಿಕ್ಷಕಿಗೆ ಕನ್ನಡ ಬರುವುದಿಲ್ಲ ಎನ್ನುವ ವಿಚಾರ ಬಯಲಾಗಿದೆ. ತಜ್ಣರ ವರದಿ ಆಧಾರದಲ್ಲಿ ಹೈಕೋರ್ಟ್ ವಿದ್ಯಾರ್ಥಿಗಳ ಪರ ತೀರ್ಪು ನೀಡಿದೆ. ಒಂದು ತಿಂಗಳ ಒಳಗೆ ಕನ್ನಡ ಬರುವ ಶಿಕ್ಷಕರನ್ನು ನೇಮಿಸುವಂತೆ ಕೇರಳ ಸರಕಾರ ಮತ್ತು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಗೆ ಆದೇಶ ಮಾಡಿದೆ.