LATEST NEWS
ಒಂದೇ ರಾತ್ರಿ ಮೂರ್ಮೂರು ಕಡೆ ಫ್ಲೆಕ್ಸ್ ; ಸಾವರ್ಕರ್, ಅಬ್ಬಕ್ಕ, ಕೋಟಿ ಚೆನ್ನಯರಿಗೂ ಸಿಗ್ತು ಸ್ಥಾನ !
ರಾಜಕೀಯ ಬಣ್ಣ ಪಡೆಯಲಿದೆಯಾ ಪ್ಲೇಕ್ಸ್ ವಿಚಾರ
ಮಂಗಳೂರು, ಜೂನ್ 3 : ಬೆಂಗಳೂರಿನಲ್ಲಿ ಸೇತುವೆ ಒಂದಕ್ಕೆ ಸಾವರ್ಕರ್ ಹೆಸರಿಡುವ ವಿಚಾರ ವಿವಾದಕ್ಕೀಡಾಗಿರುವಾಗಲೇ ಕೇಸರಿ ಪಡೆಯ ಭದ್ರಕೋಟೆ ಅಂತಲೇ ಹೆಸರಾಗಿರುವ ಮಂಗಳೂರಿನಲ್ಲಿ ಸೇತುವೆಗಳಲ್ಲಿ ಸಾವರ್ಕರ್ ಬ್ಯಾನರ್ ಕಾಣಿಸಿಕೊಂಡಿದೆ.
ನಿನ್ನೆ (ಮಂಗಳವಾರ) ರಾತ್ರಿಯೂ ಮಂಗಳೂರಿನ ಪಂಪ್ವೆಲ್ ಫ್ಲೈಓವರ್ ಮೇಲೆ ಸಾವರ್ಕರ್ ಬ್ಯಾನರ್ ಪ್ರತ್ಯಕ್ಷವಾಗಿ ಫೋಟೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಅದನ್ನು ತೆರವು ಮಾಡುವ ಕೆಲಸ ಮಾಡಿದ್ದರು. ಈ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದ ಮಾಜಿ ಸಚಿವ ಯು.ಟಿ ಖಾದರ್, ಪಂಪ್ವೆಲ್ ವೃತ್ತಕ್ಕೆ ಹಿಂದೆಯೇ ಮಹಾವೀರ ವೃತ್ತವೆಂಬ ಹೆಸರಿತ್ತು. ಈಗ ಮತ್ತೆ ಹೆಸರಿಡುವ ಪ್ರಸ್ತಾಪ ಯಾಕೆ? ಇಂಥ ಬ್ಯಾನರ್ ಹಾಕಿರುವ ಕಿಡಿಗೇಡಿಗಳನ್ನು ಕೂಡಲೇ ಪೊಲೀಸರು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.
ಆದರೆ, ಬುಧವಾರ ರಾತ್ರಿಯಾಗುತ್ತಿದ್ದಂತೆ ಪಂಪ್ವೆಲ್ ಫ್ಲೈ ಓವರ್ ನಲ್ಲಿ ಮತ್ತೆ ಸಾವರ್ಕರ್ ನಾಮಕರಣದ ಬ್ಯಾನರ್ ಪ್ರತ್ಯಕ್ಷವಾಗಿದೆ. ಅಲ್ಲದೆ, ಸೇತುವೆಯಲ್ಲಿ ಬಜರಂಗದಳ ಎಂದು ಬರೆಯಲಾಗಿದೆ. ಇದೇ ವೇಳೆ, ಉಳ್ಳಾಲದ ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ಅಬ್ಬಕ್ಕ ಮೇಲ್ಸೇತುವೆ ಎಂದು ಬ್ಯಾನರ್ ಹಾಕಿದ್ದಲ್ಲದೆ ಕಲರ್ ಪೈಂಟ್ ನಲ್ಲಿ ವೀರರಾಣಿ ಅಬ್ಬಕ್ಕ ಮೇಲ್ಸೇತುವೆಯೆಂದು ಬರೆಯಲಾಗಿದೆ.
ಈ ಫ್ಲೆಕ್ಸ್ ರಾಜಕೀಯ ಇಲ್ಲಿಗೇ ಮುಗಿದಿಲ್ಲ. ಮಂಗಳೂರಿನ ನೆಹರೂ ಮೈದಾನದಲ್ಲಿ ಮತ್ತೊಂದು ಬ್ಯಾನರ್ ಕಾಣಿಸಿದ್ದು ಅದರಲ್ಲಿ ಕೋಟಿ ಚೆನ್ನಯ ಕೇಂದ್ರ ಮೈದಾನ ಎಂದು ಬರೆಯಲಾಗಿದೆ.
ಕಿಡಿಗೇಡಿ ಯುವಕರ ಕೃತ್ಯ ಇದಾಗಿದ್ದು ಬೆಂಗಳೂರಿನಲ್ಲಿ ಸಾಧ್ಯವಾಗದ ಕೆಲಸವನ್ನು ನಾವೇ ಮಾಡಿತೋರಿಸ್ತೀವಿ ಅನ್ನುವ ರೀತಿ ಮಾಡಿರುವಂತಿದೆ. ಇದೇನಿದ್ದರೂ, ಈ ಫ್ಲೆಕ್ಸ್ ವಿಚಾರ ಇನ್ನು ಮಂಗಳೂರಿನಲ್ಲಿ ಮತ್ತೊಂದು ರಾಜಕೀಯ ಬಣ್ಣ ಪಡೆಯೋದರಲ್ಲಿ ಸಂಶಯ ಇಲ್ಲ.