LATEST NEWS
ಎನ್ಐಎ ಬಲೆಗೆ ಬಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಪ್ರಮುಖ ಆರೋಪಿ

ಮಂಗಳೂರು ಜುಲೈ 04: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅರೆಸ್ಟ್ ಮಾಡಿದೆ. ಬಂಧಿತನ ಸುಳಿವು ನೀಡಿದರೆ ಎನ್ ಐಎ 4 ಲಕ್ಷ ಬಹುಮಾನ ಕೊಡುವುದಾಗಿ ಘೋಷಣೆ ಮಾಡಿತ್ತು.
ಬಂಧಿತನನ್ನುಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಆರೋಪಿ ಕತಾರ್‌ನಿಂದ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಂಧಿಸಲಾಯಿತು ಎಂದು ಎನ್‌ಐಎ ತಿಳಿಸಿದೆ.
ರೆಹಮಾನ್ ಮತ್ತು ಇತರ ಇಬ್ಬರು ತಲೆಮರೆಸಿಕೊಂಡಿರುವ ಆರೋಪಿಗಳು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳ ವಿರುದ್ಧ ಎನ್‌ಐಎ ಈ ವರ್ಷದ ಏಪ್ರಿಲ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 28 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ರೆಹಮಾನ್ ಸುಳಿವು ನೀಡಿದವರಿಗೆ ಎನ್‌ಐಎ ₹4 ಲಕ್ಷ ಬಹುಮಾನ ಘೋಷಿಸಿತ್ತು.

ಪಿಎಫ್‌ಐ ಮುಖಂಡರ ನಿರ್ದೇಶನದ ಮೇರೆಗೆ ರೆಹಮಾನ್, ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗೆ ಆಶ್ರಯ ನೀಡಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಪ್ರವೀಣ್ ಮೇಲೆ ದಾಳಿ ನಡೆಸಿದವರ ಬಂಧನದ ಬೆನ್ನಲ್ಲೇ ಆತ ಕತಾರ್‌ಗೆ ಪಲಾಯನ ಮಾಡಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ. 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಕೇಂದ್ರ ಸರಕಾರ ಈ ಪ್ರಕರಣವನ್ನು ಎನ್ಐಎ ವಹಿಸಿತ್ತು. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದ ಎನ್‌ಐಎ ಓರ್ವ ಪ್ರಮುಖ ಆರೋಪಿ ಅತೀಖ್ ಅಹ್ಮದ್ ಸೇರಿ 22 ಆರೋಪಿಗಳನ್ನ ಬಂಧಿಸಿತ್ತು. ಒಟ್ಟು 28 ಆರೋಪಿಗಳ ವಿರುದ್ಧ ಜಾರ್ಜ್ ಶೀಟ್ ಸಲ್ಲಿಸಿದ್ದ ಎನ್‌ಐಎ ಉಳಿದ 6 ಆರೋಪಿಗಳಿಗೆ ತೀವ್ರ ಹುಡುಕಾಟ ನಡೆಸಿತ್ತು.
ನಿಷೇಧಿತ ಸಂಘಟನೆ ಪಿಎಫ್‌ಐ ಸೂಚನೆಯಂತೆ ಹತ್ಯೆ ನಡೆದಿತ್ತು. ಪ್ರಕರಣದ ಇತರ ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ವಿದೇಶಕ್ಕೆ ಹಾರಿದ್ದ ಅಬ್ದುಲ್ ರಹಿಮಾನ್ ಇಂದು ಬಂಧನವಾಗಿದ್ದಾನೆ.