LATEST NEWS
10 ಕಿಲೋಮಿಟರ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಓಡಿದ 5 ತಿಂಗಳ ಗರ್ಭಿಣಿ

ಬೆಂಗಳೂರು: ಕೋವಿಡ್ ನಿಂದಾಗಿ ನಿಲ್ಲಿಸಲ್ಪಟ್ಟಿದ್ದ ಟಿಸಿಎಸ್ ವಿಶ್ವ 10 ಕೆ ಮ್ಯಾರಥಾನ್ ಓಟ ಈ ಬಾರಿ ವರ್ಚುವಲ್ ಮೂಲಕ ನಡೆದಿದ್ದು, ಈ ಓಟದಲ್ಲಿ 5 ತಿಂಗಳ ಗರ್ಭಿಣಿ ಮಹಿಳೆ ಪಾಲ್ಗೊಂಡು 62 ನಿಮಿಷಗಳಲ್ಲಿ ಸ್ಪರ್ಧೆ ಪೂರ್ಣಗೊಳಿಸುವ ಮೂಲಕ ಸ್ಫೂರ್ತಿದಾಯಕ ಸಾಧನೆ ಮಾಡಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅಂಕಿತಾ ಗೌರ್ ಈಗ 5 ತಿಂಗಳ ಗರ್ಭಿಣಿ, 2013ರಿಂದಲೂ ಅಂಕಿತಾ ಗೌರ್ ಟಿಸಿಎಸ್ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಆದರೆ ಕಳೆದ ಮೇನಲ್ಲಿ ನಿಗದಿಯಾಗಿದ್ದ 13ನೇ ಆವೃತ್ತಿಯ ವಿಶ್ವ 10ಕೆ ಓಟ ಕರೊನಾ ಭೀತಿಯಿಂದಾಗಿ ಮುಂದೂಡಲ್ಪಟ್ಟಿತ್ತು.

ಡಿಸೆಂಬರ್ 20ರಿಂದ 27ರವರೆಗೆ ವಿಶೇಷ ಟಿಸಿಎಸ್ ಇವೆಂಟ್ ಆ್ಯಪ್ ಮೂಲಕ ಜಗತ್ತಿನೆಲ್ಲೆಡೆಯ ಸ್ಪರ್ಧಿಗಳಿಗೆ 10ಕೆ ಓಟದಲ್ಲಿ ಆಯೋಜಿಸಲಾಗಿದೆ. ವಿಶ್ವದೆಲ್ಲೆಡೆಯ ಓಟಗಾರರು ತಮಗೆ ಅನುಕೂಲವಿರುವ ಭೌಗೋಳಿಕ ಪ್ರದೇಶದಲ್ಲಿ ಓಡುವ ಮೂಲಕ ವಿಶೇಷ ಆ್ಯಪ್‌ನೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಕಳೆದ 9 ವರ್ಷಗಳಿಂದ ವಿವಿಧ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ಬಂದಿರುವ ಅಂಕಿತಾ ಗೌರ್, ಅಮ್ಮನಾಗುತ್ತಿರುವ ನಿರೀಕ್ಷೆಯ ನಡುವೆಯೂ ಭಾನುವಾರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಳೆದ 9 ವರ್ಷಗಳಿಂದ ಬಹುತೇಕ ಪ್ರತಿದಿನ ಓಡುತ್ತಿರುವೆ. ಹೀಗಾಗಿ ಈ ಸ್ಪರ್ಧೆಯಲ್ಲೂ ಪಾಲ್ಗೊಳ್ಳಲು ಬಯಸಿದೆ. ಗರ್ಭಿಣಿಯಾಗಿರುವ ಸಮಯದಲ್ಲಿ ಓಟ ಉತ್ತಮ ವ್ಯಾಯಾಮವಾಗಿದೆ’ ಎಂದು ಅಂಕಿತಾ ಗೌರ್ ಹೇಳಿದ್ದಾರೆ.
ವೈದ್ಯರ ಒಪ್ಪಿಗೆಯ ಮೇರೆಗೆ ಓಟದಲ್ಲಿ ಪಾಲ್ಗೊಂಡಿದ್ದ ಅಂಕಿತಾ ಗೌರ್, ತಂದೆ-ತಾಯಿ ಮತ್ತು ಪತಿಯೂ ಇದಕ್ಕೆ ಬೆಂಬಲ ಸೂಚಿಸಿದ್ದರು ಎಂದಿದ್ದಾರೆ. ನಮ್ಮ ವೈದ್ಯರು ಓಟದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹವನ್ನೇ ನೀಡಿದ್ದರು. ಆದರೆ ಅತಿ ವೇಗವಾಗಿ ಓಡದಂತೆ ಸೂಚಿಸಿದ್ದರು ಎಂದು ಗೌರ್ ತಿಳಿಸಿದ್ದಾರೆ. ಓಟದ ನಡುನಡುವೆ ವಿರಾಮ ಪಡೆದ ಮತ್ತು ಕೆಲವೊಮ್ಮೆ ನಡೆಯುತ್ತ ಸಾಗಿದ ಕಾರಣದಿಂದಾಗಿ ಈ ಹಿಂದಿನಂತೆ ಪದಕ ಜಯಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ