LATEST NEWS
ಉಡುಪಿ ಕೋಟೇಶ್ವರದಲ್ಲಿ ಅತಿ ಪ್ರಾಚೀನ ಶಿಲಾ ಶಾಸನ ಪತ್ತೆ..!!
ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು ಕನ್ನಡ ಲಿಪಿ ಮತ್ತು ಸಂಸ್ಕೃತ ಭಾಷೆಯ ಮೂರು ಸಾಲುಗಳನ್ನು ಹೊಂದಿದ್ದು, ಶಾಸನವು ಭಗ್ನಗೊಂಡಿರುವುದರಿಂದ ಹೆಚ್ಚಿನ ಮಾಹಿತಿಗಳು ಲಭ್ಯವಾಗುವುದಿಲ್ಲ. ಕೋಟೇಶ್ವರದಲ್ಲಿ ಈವರೆಗೆ ಸಿಕ್ಕಿದ ಶಾಸನಗಳಲ್ಲಿ ಅತಿ ಪ್ರಾಚೀನವಾದದ್ದು, ವೀರ ಪಾಂಡ್ಯದೇವ ಆಳುಪೇಂದ್ರ ದೇವರಸನ ಕಾಲದ ಶಾಸನ (ಸಾ.ಶ.ವ 1261). ಆದರೆ ಈಗ ಅಧ್ಯಯನಕ್ಕೆ ಒಳಪಡಿಸಿದ ಈ ಶಾಸನವು ಲಿಪಿ ಲಕ್ಷಣದ ಆಧಾರದ ಮೇಲೆ ಏಳುವರೆ -ಎಂಟನೇ (7½ – 8) ಶತಮಾನಕ್ಕೆ ಸೇರುವುದರಿಂದ ಈ ಶಾಸನವು ಕೋಟೇಶ್ವರದಲ್ಲಿ ಇದುವರೆಗೆ ಪತ್ತೆಯಾದ ಶಾಸನಗಳಲ್ಲಿಯೇ ಪ್ರಾಚೀನವಾದುದ್ದು ಮಾತ್ರವಲ್ಲದೇ ಕರಾವಳಿ-ಕರ್ನಾಟಕದ ಪ್ರಾಚೀನ ಶಾಸನಗಳಲ್ಲಿ ಒಂದಾಗಿದೆ.
ಶಾಸನದ ಪಠ್ಯ1. ಸ್ವಸ್ತಿ ಶ್ರೀ ಪೊಲಿ ಆಚಾ (ರ) -2. ಪಾಲ ಮೈತ್ರಿವರುಣ ವಂಶಜ -3. ಸೊಮಯಾಜ್ಯಸ್ಯ ಪೌತ್ರಾಣ
ಈ ಶಾಸನದ ಪಠ್ಯವನ್ನು ಓದಿಕೊಡುವಲ್ಲಿ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಕೇಂದ್ರ- ಕುಕ್ಕೆಸುಬ್ರಹ್ಮಣ್ಯ ಇಲ್ಲಿನ ಉಪನಿರ್ದೇಶಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಸಹಕಾರ ನೀಡಿರುತ್ತಾರೆ.