DAKSHINA KANNADA
ಸುಳ್ಯ: ಹಾಲು ಕೊಡಲು ತೆರಳುತ್ತಿದ್ದ ಯುವಕನ ಮೇಲೆ ಆನೆ ದಾಳಿ, ಗಂಭೀರ ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು

ಸುಳ್ಯ, ಮಾರ್ಚ್ 13: ತಾಲೂಕಿನ ಕೊಲ್ಲಮೊಗ್ರ ಗ್ರಾಮದ ಇಡ್ನೂರು ಹಾಲು ಸೊಸೈಟಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ಯುವಕನ ಮೇಲೆ ಒಂಟಿ ಕಾಡಾನೆಯೊಂದು ದಾಳಿ ಮಾಡಿ, ಗಂಭೀರ ಗಾಯಗೊಳಿಸಿದ ಘಟನೆ ಮಾರ್ಚ್13ರ ಮುಂಜಾನೆ ನಡೆದಿದೆ.
ಕೊಲ್ಲಮೊಗ್ರ ಗ್ರಾಮದ ಗೋನಡ್ಕ ನಿವಾಸಿ ಗುರುಪ್ರಸಾದ್ (21) ಆನೆದಾಳಿಗೊಳಗಾದ ಯುವಕ. ತನ್ನ ಮನೆಯಿಂದ ಹಾಲಿನ ಡಿಪೋಗೆ ಎಂದಿನಂತೆ ಬೈಕಿನಲ್ಲಿ ಹಾಲು ಸಾಗಿಸುತ್ತಿದ್ದಾಗ ಆನೆ ಅವರ ಮೇಲೆ ದಾಳಿ ಮಾಡಿದೆ.

ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಯುವಕನ ಮೇಲೆ ದಾಳಿ ಮಾಡಿದ ಆನೆ ಆತನನ್ನು ಕೆಲ ದೂರದವರೆಗೆ ಎಳೆದೊಯ್ದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಇದನ್ನು ದೂರದಿಂದ ನೋಡಿದ ಅಡಿಕೆ ಕೀಳಲು ಹೋಗುತ್ತಿದ್ದ ಕಾರ್ಮಿಕರೊಬ್ಬರು ಜೋರಾಗಿ ಕಿರುಚಾಡಿದ್ದಾರೆ.
ಆನೆ ದಾಳಿಗೆ ಒಳಗಾದ ಯುವಕ ಹಾಗೂ ಕಾರ್ಮಿಕನ ಜೋರಾದ ಕಿರುಚಾಟ ಕೇಳಿ ಸ್ಥಳೀಯರು ಓಡಿ ಬಂದಿದ್ದು, ಈ ವೇಳೆ ಆನೆ ಯುವಕನನ್ನು ಬಿಟ್ಟು ನಿರ್ಗಮಿಸಿದೆ. ಇನ್ನು ಆನೆ ದಾಳಿ ಮಾಡಿದ ಸ್ಥಳವೂ ಜನವಸತಿ ಪ್ರದೇಶವಾಗಿದ್ದು 20-25 ಕ್ಕೂ ಹೆಚ್ಚು ಮನೆಗಳು ಸುತ್ತಮುತ್ತ ವಿದೆ. ಘಟನೆಯಿಂದ ಪುದೇಶದ ಜನರಲ್ಲಿ ಭೀತಿ ಸೃಷ್ಟಿಯಾಗಿದೆ.
ಕೊಲ್ಲಮೊಗ್ರ ಗ್ರಾಮದಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ಮನುಷ್ಯನ ಮೇಲಿನ ಆನೆಯ ದಾಳಿ ಎರಡನೇ ದಾಳಿ ಇದಾಗಿದೆ. ನಾಲ್ಕು ತಿಂಗಳ ಹಿಂದೆ ಆನೆ ದಾಳಿಗೆ ತುತ್ತಾದ ವಯೋವೃದ್ಧರೊಬ್ಬರು ಸಾವನ್ನಪ್ಪಿದ್ದರು. ಕೃಷಿಗಷ್ಟೇ ಹಾನಿ ಮಾಡುತ್ತಿದ್ದ ಆನೆ ಇದೀಗ ಮನುಷ್ಯನನ್ನು ಗುರಿಯಾಗಿರಿಸುವುದು ಸ್ಥಳೀಯರಲ್ಲಿ ಆತಂಕಕ್ಕೆ ಮೂಡಿಸಿದೆ.