ಪುಣೆ, ಮಾರ್ಚ್ 13: ನಗರದ ಪಬ್ ಹಾಗು ಬಾರ್‌ಗಳಲ್ಲಿ ಬೌನ್ಸರ್ ಬಳಕೆ ಸಾಮಾನ್ಯವಾಗಿದ್ದು, ಸೆಲೆಬ್ರಿಟಿಗಳು ಅಭಿಮಾನಿಗಳಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೂ ಬೌನ್ಸರ್ ಬಳಸುವುದು ಸಾಮಾನ್ಯ. ಆದರಿ ಪುಣೆಯ ಶಾಲೆಯೊಂದರಲ್ಲಿ ಬೌನ್ಸರ್ ತೋರಿದ ವರ್ತನೆ ಇದೀಗ ಸುದ್ದಿಯಾಗಿದೆ. 
ಅಚ್ಚರಿಯ ವಿಷಯವೆಂದರೆ ಶಾಲೆಯೊಂದು ಬೌನ್ಸರ್ ನೇಮಿಸಿಕೊಂಡಿದ್ದು, ಆ ಬೌನ್ಸರ್ ಪೋಷಕರಿಗೆ ಥಳಿಸಿದ್ದು ಇದೀಗ ವಿವಾದವಾಗಿದೆ. ಈ ಘಟನೆ ನಡೆದಿರುವುದು ಪುಣೆ ನಗರದಲ್ಲಿ. ಶಾಲೆಯ ಶುಲ್ಕದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಲು ಬಿಬ್ವೆವಾಡಿಯ ಕ್ಲೈನ್ ಮೆಮೋರಿಯಲ್ ಹೈಸ್ಕೂಲ್‌ಗೆ ತೆರಳಿದ್ದ ವಿದ್ಯಾರ್ಥಿಯ ಪೋಷಕರ ಮೇಲೆ ಮಹಿಳಾ ಬೌನ್ಸರ್‌ನಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಮಂಗೇಶ್ ಗಾಯಕ್ವಾಡ್ ಅವರು ಬಿಬ್ವೆವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಪಾಲಕರು ಮತ್ತು ಶಾಲೆಯ ನಡುವೆ ಶುಲ್ಕದ ವಿಷಯದಲ್ಲಿ ಜಗಳ ನಡೆದಿದ್ದು, ನಂತರ ಹಲ್ಲೆ ಘಟನೆ ನಡೆದಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಮಹಿಳಾ ಬೌನ್ಸರ್‌ನಿಂದ ಗಾಯಕ್ವಾಡ್ ಹಲ್ಲೆಗೊಳಗಾದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.