ಮಂಗಳೂರು, ಆಗಸ್ಟ್ 19 : ಮಂಗಳೂರು ಮೂಡಬಿದ್ರೆಯ  ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯೊಬ್ಬಳು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾಳೆ. ಲಖನೌದ  ಸಾಯಿ ಟ್ರೇನಿಂಗ್ ಸೆಂಟರ್ ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಗಾಗಿ ನಡೆದ ಟ್ರಯಲ್ ಸ್ಪರ್ಧೆಯಲ್ಲಿ 38 ಕೆ.ಜಿ ವಿಭಾಗದಲ್ಲಿ ಕುಸ್ತಿ ಪಟು ಮಮತಾ ಕೆಳೋಜಿ ಜಯಗಳಿಸಿದ್ದಾರೆ. ಈ ಮೂಲಕ ಮಮತಾ  ಗ್ರೀಕ್ ನ  ಅಥೆನ್ಸ್ ನಲ್ಲಿ ಸೆಪ್ಟೆಂಬರ್ 1ರಿಂದ  ಆರು ದಿನಗಳ ಕಾಲ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಮೂಡಬಿದ್ರೆ ಆಳ್ವಾಸ್ ವಿಧ್ಯಾರ್ಥಿನಿ

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಮತಾ ಕೆಳೋಜಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ದುಸ್ಕಿ ಗ್ರಾಮದವರು. ಮಾರುತಿ ಕೆಳೋಜಿ ದಂಪತಿಗಳ ಪುತ್ರಿಯಾಗಿರುವ ಮಮತಾ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾರೆ.

ಬಾಲ್ಯದಲ್ಲಿಯೇ ಕುಸ್ತಿ ಅಖಾಡಕ್ಕಿಳಿದ ಮಮತಾ ಹಳಿಯಾಳದ ಸ್ಥಳೀಯ ಕುಸ್ತಿ ಅಖಾಡದಲ್ಲಿ ಮೂರು ವರ್ಷ ಕುಸ್ತಿ ತರಬೇತಿ ಪಡೆದಿದ್ದಾರೆ. ನಂತರ ಮಮತಾ ಕೆಳೋಜಿ, 9ನೇ ತರಗತಿಗೆ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಗೆ ಕ್ರೀಡಾ ಕೋಟಾದಡಿ ಪ್ರವೇಶ ಪಡೆದರು.

ಕಳೆದ ನಾಲ್ಕು ವರ್ಷದಿಂದ ಆಳ್ವಾ ಶಿಕ್ಷಣ ಸಂಸ್ಥೆಯಲ್ಲಿ ಕುಸ್ತಿ ಕೋಚ್ ತುಕಾರಾಮ ಅವರಿಂದ ಮಮತಾ ತರಬೇತಿ ಪಡೆಯುತ್ತಿದ್ದಾರೆ. ಕಳೆದ ಜೂನ್ ನಲ್ಲಿ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ಗಾಗಿ ನಡೆದ ಆಯ್ಕೆ ಪಂದ್ಯಾವಳಿಯಲ್ಲಿ ಕೇವಲ ಒಂದು ಪಾಯಿಂಟ್ ನಿಂದ ಮಮತಾ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ಪಂದ್ಯಾವಳಿ ಯಲ್ಲಿ  ಭಾಗವಹಿಸುವ ಅವಕಾಶದಿಂದ  ವಂಚಿತರಾಗಿದ್ದರು.

ಆದರೆ ಲಖನೌನ ಸಾಯಿ ಟ್ರೇನಿಂಗ್ ಸೆಂಟರ್ ನಲ್ಲಿ ಸಬ್ ಜೂನಿಯರ್ ಬಾಲಕಿಯರ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಗಾಗಿ ನಡೆದ ಟ್ರಯಲ್ಸ್ ಸ್ಪರ್ಧೆಯಲ್ಲಿ ಉತ್ತರ ಪ್ರದೇಶದ ಕುಸ್ತಿಪಟು ರಂಜನಾ ಅವರನ್ನು ಕೇವಲ 1.30 ನಿಮಿಷ ದಲ್ಲಿ 10-0 ಅಂತರದಲ್ಲಿ ಪರಾಭವಗೊಳಿಸುವ ಮೂಲಕ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾಳೆ.

ಡಾ. ಮೋಹನ್ ಆಳ್ವ ಅಭಿನಂದನೆ

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಮೋಹನ್ ಆಳ್ವ ಅವರು ಕುಸ್ತಿ ವಿಶ್ವ ಚಾಂಪಿಯನ್ ಶಿಪ್ ಗೆ  ಆಯ್ಕೆಯಾದ ಮಮತಾ ಕೆಳೋಜಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

1 Shares

Facebook Comments

comments