LATEST NEWS
ಮುಸ್ಲಿಂ ಎಂಬ ಕಾರಣಕ್ಕೆ ಡಿವೈಎಫ್ಐ ಮುಖಂಡನ ಮೇಲೆ ಪೊಲೀಸ್ ದೌರ್ಜನ್ಯ ಆರೋಪ

ಮುಸ್ಲಿಂ ಎಂಬ ಕಾರಣಕ್ಕೆ ಡಿವೈಎಫ್ಐ ಮುಖಂಡನ ಮೇಲೆ ಪೊಲೀಸ್ ದೌರ್ಜನ್ಯ ಆರೋಪ
ಮಂಗಳೂರು ಅಕ್ಟೋಬರ್ 3: ಬೇಕರಿಗೆ ಬಾಗಿಲು ಹಾಕಿ ತನ್ನ ತಮ್ಮನೊಂದಿಗೆ ಪತ್ನಿಯ ಮನೆಗೆ ತೆರಳುತ್ತಿದ್ದ ಡಿವೈಎಫ್ಐ ಮುಖಂಡರೊಬ್ಬರಿಗೆ ವೇಣೂರು ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು , ಡಿವೈಎಫ್ ಐ ಮುಖಂಡ ರಿಯಾಜ್ ಅವರು ಅಂಗಡಿ ಮುಚ್ಚಿ ತನ್ನ ತಮ್ಮನೊಂದಿಗೆ ಬೈಕ್ ನಲ್ಲಿ ಮೂಡಬಿದ್ರೆಯಿಂದ ಹೆಂಡತಿ ಮನೆಗೆ ತೆರಳುವಾಗ ವೇಣೂರು ಬಳಿ ಗಸ್ತಿನಲ್ಲಿದ್ದ ಏಳೆಂಟು ಪೊಲೀಸರು ತಡೆದಿದ್ದಾರೆ. ದಾಖಲೆಗಳನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ರಿಯಾಜ್ ತಮ್ಮ ಬಳಿ ಇದ್ದ ಡ್ರೈವಿಂಗ್ ಲೈಸನ್ಸ್ ನೀಡಿದ್ದಾರೆ.

ವಾಹನದ ದಾಖಲೆ ಮನೆಯಲ್ಲಿದ್ದು ಬೆಳಿಗ್ಗೆ ತರುವುದಾಗಿ ಹೇಳಿದಾಗ, ಸ್ಥಳದಲ್ಲಿ ಇದ್ದ ತಾರನಾಥ, ರಂಜಿತ್ ಮುಂತಾದ ಪೊಲೀಸರು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಿಯಾಜ್ ಎಂಬ ಹೆಸರು ನೋಡಿ “ಬ್ಯಾರಿ ನೀನು ಕಳ್ಳತನಕ್ಕೇ ಹೋಗುತ್ತಿದ್ದೀಯಾ, ಉಗ್ರಗಾಮಿ ತರ ಕಾಣುತ್ತೀರಾ” ಎಂದು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅದೇ ಸಂದರ್ಭ ಅದೇ ದಾರಿಯಲ್ಲಿ ಖಾಸಗಿ ವಾಹನದಲ್ಲಿ ಕುಟುಂಬ ಸಮೇತ ತೆರಳುತ್ತಿದ್ದ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಪೊಲೀಸರಲ್ಲಿ “ವಿಷಯ ಏನು ?” ಎಂದು ಕೇಳಿದ್ದಾರೆ.” ಪೊಲೀಸರಿಗೆ ಎದುರು ಮಾತಾಡುತ್ತಾರೆ” ಎಂದು ಹೇಳಿದ್ದಾರೆ. ನಾಗೇಶ್ ಕದ್ರಿ “ಒದ್ದು ಒಳಗೆ ಹಾಕಿ” ಎಂದು ಆದೇಶಿಸಿದ್ದಾರೆ.
ನಂತರ ಇಬ್ಬರನ್ನು ಪೊಲೀಸ್ ವಾಹನದಲ್ಲೇ ಹಲ್ಲೆ ನಡೆಸುತ್ತಾ ಠಾಣೆಗೆ ಎಳೆದೊಯ್ಯಲಾಗಿದೆ. ಅಲ್ಲಿ ಹದಿನೈದಕ್ಕೂ ಹೆಚ್ವು ಪೊಲೀಸರು ಲಾಕಪ್ ನಲ್ಲಿ ಕೂಡಿ ಹಾಕಿ ಸಿನೆಮಾ ಮಾದರಿಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಹಲ್ಲೆಯ ಜೊತೆಗೆ ಬ್ಯಾರಿಗಳಿಗೆ ಅವಾಚ್ಯವಾಗಿ ಬಯ್ಯುತ್ತಲೇ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಕೊನೆಗೆ ಪೊಲೀಸರಿಗೆ ಹಲ್ಲೆ ನಡೆಸಿದ ಆರೋಪವನ್ನು ಹೊರಿಸಿ FIR ದಾಖಲಿಸಿದ್ದಾರೆ.