LATEST NEWS
ಬಾಬರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿದಂತೆ ಎಲ್ಲ ಆರೋಪಿಗಳು ದೋಷಮುಕ್ತ
ಲಕ್ನೋ ಸೆಪ್ಟೆಂಬರ್ 30: ಬಾಬ್ರಿ ಮಸೀದಿ ಧ್ವಂಸ ಪೂರ್ವ ನಿಯೋಜಿತ ಅಲ್ಲ. ಇದೊಂದು ಆಕಸ್ಮಿಕ ಘಟನೆ ಎಂದು ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಕೋರ್ಟ್ ಈ ತೀರ್ಪು ಪ್ರಕಟಿಸುವ ಮೂಲಕ 28 ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಸೇರಿದಂತೆ ಎಲ್ಲ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕೇಸಿನಲ್ಲಿ ಎಲ್ಲಾ 32 ಮಂದಿ ಆರೋಪಿಗಳು ದೋಷಮುಕ್ತರು ಎಂದು ಲಖನೌ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಒಂದು ಆಕಸ್ಮಿಕ ಘಟನೆ, ಮಸೀದಿ ಧ್ವಂಸ ಒಂದು ಪೂರ್ವ ನಿಯೋಜಿತ ಕೃತ್ಯವಲ್ಲ, ಆರೋಪಿಗಳ ವಿರುದ್ಧ ಪೂರ್ವ ಪ್ರಬಲ ಸಾಕ್ಷಿಗಳಿಲ್ಲ ಎಂದು ನ್ಯಾಯಮೂರ್ತಿ ಎಸ್ ಕೆ ಯಾದವ್ ತೀರ್ಪು ಪ್ರಕಟಿಸಿದ್ದಾರೆ. ಈ ಮೂಲಕ 28 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ತಾತ್ವಿಕ ಅಂತ್ಯ ಸಿಕ್ಕಿದೆ.
1992 ಡಿಸೆಂಬರ್ 6 ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 351 ಸಾಕ್ಷಿಗಳನ್ನು ಹಾಗೂ 600 ದಾಖಲೆ ಪ್ರತಿಗಳನ್ನು ವಿಶೇಷ ನ್ಯಾಯಾಲಯಕ್ಕೆ ನೀಡಿದೆ. ಆರಂಭಿಕವಾಗಿ 48 ಮಂದಿಯನ್ನು ಆರೋಪಿಗಳೆಂದು ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆದರೆ ಮೂರು ದಶಕಗಳಿಂದ ವಿಚಾರಣೆ ನಡೆಯುತ್ತಿದ್ದ ಕಾರಣ 48 ಜನ ಆರೋಪಿಗಳ ಪೈಕಿ 16 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 32 ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿತ್ತು.
32 ಮಂದಿಆರೋಪಿಗಳು ಯಾರು?
ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಧೀರ್ ಕಕ್ಕರ್, ಸತೀಶ್ ಪ್ರಧಾನ್, ರಾಮ್ ಚಂದ್ರ ಖತ್ರಿ, ಸಂತೋಷ್ ದುಬೆ, ಓಂ ಪ್ರಕಾಶ್ ಪಾಂಡೆ, ಕಲ್ಯಾಣ್ ಸಿಂಗ್, ಉಮಾ ಭಾರತಿ, ರಾಮ್ ವಿಲಾಸ್ ವೇದಾಂತಿ, ವಿನಯ್ ಕಟಿಯಾರ್, ಪ್ರಕಾಶ್ ಶರ್ನಾ, ಗಾಂಧಿ ಸಿಂಗ್ ಕಮಲೇಶ್ ತ್ರಿಪಾಠಿ, ಬ್ರಿಜ್ ಭೂಷಣ್ ಸಿಂಗ್, ರಾಮ್ಜಿ ಗುಪ್ತಾ, ಮಹಂತ್ ನೃತ್ಯ ಗೋಪಾಲ್ ದಾಸ್, ಚಂಪತ್ ರಾಯ್, ಸಾಕ್ಷಿ ಮಹಾರಾಜ್, ವಿನಯ್ ಕುಮಾರ್ ರೈ, ನವೀನ್ ಭಾಯ್ ಶುಕ್ಲಾ, ಧರ್ಮದಾಸ್, ಜೈ ಭಗವಾನ್ ಗೋಯೆಲ್, ಅಮರನಾಥ್ ಗೋಯೆಲ್, ಸಾಧ್ವಿ ರಿತಂಬರ, ಪವನ್ ಪಾಂಡೆ, ವಿಜಯ್ ಬಹದ್ದೂರ್ ಸಿಂಗ್, ಆರ್‌ಎಂ ಶ್ರೀವತ್ಸ, ಧರ್ಮೇಂದ್ರ ಸಿಂಗ್ ಗುಜ್ಜರ್.