LATEST NEWS
ಕೊಲ್ಲೂರಿನಲ್ಲಿ ಸಂಭ್ರಮದ ಅಕ್ಷರಾಭ್ಯಾಸ

ಕೊಲ್ಲೂರಿನಲ್ಲಿ ಸಂಭ್ರಮದ ಅಕ್ಷರಾಭ್ಯಾಸ
ಉಡುಪಿ ಅಕ್ಟೋಬರ್ 19: ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ವಿಜಯದಶಮಿಯಂದು ನಡೆಯುವ ವಿದ್ಯಾರಂಭ ಧಾರ್ಮಿಕ ಕಾರ್ಯಕ್ರಮ ಇಂದು ಸಂಭ್ರಮದಿಂದ ನಡೆಯಿತು.
ಇಂದು ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಸಾವಿರಾರು ಹೆತ್ತವರು ತಮ್ಮ ಮಗುವಿಗೆ ದೇವರ ಸನ್ನಿದಿಯಲ್ಲಿ ಅಕ್ಷರಾಭ್ಯಾಸ ಬೋದಿಸಿದರು. ಇತಿಹಾಸ ಪ್ರಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಕೇರಳ ಸೇರಿದಂತೆ ದಕ್ಷಿಣ ಭಾರತದ ಸಾವಿರಾರು ಭಕ್ತರು ಪಾಲ್ಗೊಂಡು ಪೂಜೆ ಸಲ್ಲಿಸಿದರು.

ಉಡುಪಿ ಜಿಲ್ಲೆಯ ಶ್ರೀ ಮೂಕಾಂಬಿಕಾ ದೇವಿ ಕರ್ನಾಟಕ ಮಾತ್ರವಲ್ಲ, ಪಕ್ಕದ ಕೇರಳ, ತಮಿಳುನಾಡಿನ ಭಕ್ತರಿಗೂ ಅಮ್ಮ ಆಗಿರುವುದರಿಂದ ನವರಾತ್ರಿ ದಿನಗಳಲ್ಲಿ ನಿತ್ಯ ಉತ್ಸವೋಪಾದಿಯಲ್ಲಿ ಜನ ಸೇರುತ್ತಾರೆ. ಇಲ್ಲಿನ ನವರಾತ್ರಿ ವೈಶಿಷ್ಟ್ಯ ಎಂದರೆ ವಿದ್ಯಾರಂಭ. ಚಿಕ್ಕ ಮಕ್ಕಳಿಗೆ ಇಲ್ಲಿನ ಸರಸ್ವತಿ ಗುಡಿ ಮುಂದೆ ವಿದ್ಯಾರಂಭ ಮಾಡಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎನ್ನುವ ನಂಬಿಕೆ ಇದೆ.
ಸಾವಿರಾರು ಭಕ್ತರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ವಿಜಯದಶಮಿಯ ವಿಶೇಷವಾಗಿ ಇಂದು ತಮ್ಮ ಮಕ್ಕಳಿಗೆ ಸಂಭ್ರಮದಿಂದ ಅಕ್ಷರಾಭ್ಯಾಸದಲ್ಲಿ ತೊಡಗಿಕೊಂಡರು. ದೇವರ ಸನ್ನಿಧಿಯಲ್ಲಿ ಮಗುವಿಗೆ ವಿಧ್ಯಾದೇವತೆ ಸರಸ್ವತಿ ಹೆಸರನ್ನು ಅಕ್ಕಿಯಲ್ಲಿ ಬರೆಯುವ ಮೂಲಕ ಅಕ್ಷರ ಭೋದಿಸುವ ಈ ಧಾರ್ಮಿಕ ವಿಧಿ ವಿಧಾನದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ದಕ್ಷಿಣ ಭಾರತದ ವಿವಿಧ ಕಡೆಗಳಿಂದ ಮತ್ತು ಕೇರಳದಿಂದ ಅತ್ಯಧಿಕ ಸಂಖ್ಯೆ ಪಾಲ್ಗೊಳ್ಳುವ ಭಕ್ತರು ಮಗುವಿನ ವಿಧ್ಯೆಗೆ ಹೆಚ್ಚಿನ ಮಹತ್ವಕೊಟ್ಟು ಈ ವಿಧಿ ನೆರವೇರಿಸುತ್ತಾರೆ.
ಕೇರಳದಲ್ಲಿ ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವವಿರುವಂತೆ ಹೆತ್ತವರು ಎಳೆಯ ಮಗುವಿಗೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಧಾರ್ಮಿಕ ವಿಧಿ ನಡೆಸಲು ಪ್ರಾಮುಖ್ಯತೆ ನೀಡುತ್ತಾರೆ. ಕೊಲ್ಲೂರು ದೇವಿಯ ಸನ್ನಿಧಿಯಲ್ಲಿ ವಿಧ್ಯಾರಂಭ ನಡೆಸಿದರೆ ಮಗುವಿನ ಕಲಿಕೆಗೆ ಉತ್ತಮ ಭವಿಷ್ಯವಿದೆ ಎನ್ನುವ ನಂಬುಗೆಯಿದ್ದು ಈ ಕಾರಣದಿಂದ ಹೆಚ್ಚಿನ ಭಕ್ತರು ತಮ್ಮ ಮಗುವಿಗೆ ಅಕ್ಷರಾಭ್ಯಾಸದ ವಿಧಿ ವಿಧಾನವನ್ನು ಇಲ್ಲಿ ನಡೆಸಿದರು.
ವಿಜಯದಶಮಿಯ ವಿಶೇಷವಾಗಿ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಇಂದು ಮುಂಜಾನೆ 4 ಗಂಟೆಯಿಂದ ಮಧ್ಯಾಹ್ನದವರೆಗೆ ಅಕ್ಷರಾಭ್ಯಾಸ ವಿಧಿ ನಡೆಯಿತು. ಕೇರಳ ಸೇರಿದಂತೆ ದಕ್ಷಿಣ ಭಾರತದ ಭಕ್ತರು ಪಾಲ್ಗೊಂಡು ತಮ್ಮ ಮುದ್ದು ಕಂದಮ್ಮಗಳಿಗೆ ಅಕ್ಷರಾಭ್ಯಾಸ ನಡೆಸುವ ಮೂಲಕ ಅವರ ಉತ್ತಮ ಭವಿಷ್ಯದ ಹರಕೆ ಹೊತ್ತ ಈ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.