Connect with us

DAKSHINA KANNADA

ಅಕ್ರಮ ಸಕ್ರಮ ಅರ್ಜಿ ವಿಲೇಗೆ ಸಚಿವ ಕಾಗೋಡು ಸೂಚನೆ

Share Information

ಮಂಗಳೂರು ಸೆಪ್ಟಂಬರ್ 14 : ಸಕ್ರಮ ಪ್ರಕರಣಗಳ ಅರ್ಜಿ ವಿಲೇವಾರಿಗೆ ಪ್ರತೀ ವಾರ ಸಭೆ ನಡೆಸಲು ರಾಜ್ಯ ಸರಕಾರ ಸೂಚಿಸಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
 ಅವರು ಗುರುವಾರ ಮಂಗಳಗಂಗೋತ್ರಿಯ ವಿಶ್ವವಿದ್ಯಾನಿಲಯ ಅತಿಥಿಗೃಹದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಅಕ್ರಮ ಸಕ್ರಮ ಪ್ರಕರಣಗಳ ಅರ್ಜಿಗಳ ವಿಲೇವಾರಿಗೆ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ.
                ಅರ್ಜಿಗಳ ತ್ವರಿತ ವಿಲೇವಾರಿಗೆ ವಾರಂಪ್ರತಿ ಸಭೆ ನಡೆಸಲು ತಹಶೀಲ್ದಾರ್‍ಗಳಿಗೆ ಸೂಚಿಸಲಾಗಿದ್ದು, ಸಮಿತಿಯ ಇಬ್ಬರು ಸದಸ್ಯರ ಕೋರಂನಲ್ಲೂ ಸಭೆ ನಡೆಸಬಹುದಾಗಿದೆ ಎಂದು ಸಚಿವರು ತಿಳಿಸಿದರು. ಈ ವರ್ಷದ ಆಗಸ್ಟ್ ಅಂತ್ಯದವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಾರಂ 50 ರಡಿ 46470 ಅರ್ಜಿಗಳಿಗೆ ಭೂಮಿ ಮಂಜೂರಾತಿ ಮಾಡಲಾಗಿದೆ. ಅದೇ ರೀತಿ ಫಾರಂ 53ರಡಿ 29915 ಪ್ರಕರಣಗಳಲ್ಲಿ ಭೂಮಿ ಮಂಜೂರಾತಿ ಮಾಡಲಾಗಿದೆ.
                   ಕೆಲವು ಜಮೀನುಗಳು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುತ್ತಿರುವುದರಿಂದ ಅಂತಹ ಅರ್ಜಿಗಳನ್ನು ತಾತ್ಕಾಲಿಕ ವಿಲೇ ಇಡಲಾಗಿದೆ. ಬಾಕಿ ಇರುವ ಅಕ್ರಮ ಸಕ್ರಮ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಕಾಗೋಡು ತಿಮ್ಮಪ್ಪ  ಹೇಳಿದರು.
 ಅಕ್ರಮ ಸಕ್ರಮ ಸಭೆಯಲ್ಲಿ ಭೂಮಿ ಮಂಜೂರಾತಿಗೊಂಡವರಿಗೆ ಕೂಡಲೇ ಹಕ್ಕುಪತ್ರ ಹಾಗೂ ಆರ್‍ಟಿಸಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿ ಕುಳಿತವರ ಮನೆ ಅಡಿ ಸ್ಥಳ ಸಕ್ರಮೀಕರಣಕ್ಕೆ 94 ಸಿ ಅಡಿ ಇದುವರೆಗೆ ಜಿಲ್ಲೆಯಲ್ಲಿ 77814 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 35577 ಮನೆಗಳಿಗೆ ಮಂಜೂರಾತಿ ನೀಡಿ ಹಕ್ಕುಪತ್ರ ಒದಗಿಸಲಾಗಿದೆ. ಹಕ್ಕುಪತ್ರ ನೀಡಲು ಬಾಕಿ ಇದ್ದವರಿಗೆ ಶೀಘ್ರದಲ್ಲೇ ವಿತರಿಸಲಾಗುವುದು. ಅದೇ ರೀತಿ ನಗರ ಪ್ರದೇಶಗಳಲ್ಲಿ 94ಸಿಸಿ ಅಡಿ 30872 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇವುಗಳಲ್ಲಿ 9309 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಕಂದಾಯ ಸಚಿವರು ವಿವರಿಸಿದರು.
                     ಪರಿಶಿಷ್ಟ ಜಾತಿ, ಪಂಗಡದ 6,  ಹಿಂದುಳಿದ ವರ್ಗಗಳ 20 ಮತ್ತು ಅಲ್ಪಸಂಖ್ಯಾತರ ವರ್ಗದ 5  ವಿದ್ಯಾರ್ಥಿನಿಲಯಗಳಿಗೆ ಜಾಗ ಕೋರಿ 31 ಅರ್ಜಿಗಳು ವಿವಿಧ ಇಲಾಖೆಗಳಿಂದ ಬಂದಿದ್ದು, ಜಿಲ್ಲೆಯಲ್ಲಿ ಎಲ್ಲಾ ಪ್ರಕರಣಗಳಲ್ಲೂ ಹಾಸ್ಟೆಲ್‍ಗಳಿಗೆ ಜಾಗ ಮಂಜೂರುಗೊಳಿಸಿ, ಜಮೀನು ಹಸ್ತಾಂತರಿಸಲಾಗಿದೆ. ಅಂಗನವಾಡಿಗಳಿಗೆ ಮತ್ತು ಸಾರ್ವಜನಿಕ ರುದ್ರಭೂಮಿ, ಸ್ಮಶಾನಗಳಿಗೆ ಆದ್ಯತೆಯಲ್ಲಿ ಜಮೀನು ಮಂಜೂರಾತಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ವಿವರಿಸಿದರು.
 ಸಭೆಯಲ್ಲಿ ಆಹಾರ ಸಚಿವ ಯು.ಟಿ. ಖಾದರ್, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಉಪವಿಭಾಗಾಧಿಕಾರಿಗಳಾದ ಎ.ಸಿ. ರೇಣುಕಾ ಪ್ರಸಾದ್, ಡಾ. ರಘುನಂದನಮೂರ್ತಿ, ಜಿಲ್ಲೆಯ ತಹಶೀಲ್ದಾರ್‍ಗಳು ಉಪಸ್ಥಿತರಿದ್ದರು.

Share Information
Advertisement
Click to comment

You must be logged in to post a comment Login

Leave a Reply