LATEST NEWS
ಕೇರಳ : ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ..ತಿರುವನಂತಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್
ತಿರುವನಂತಪುರಂ ಫೆಬ್ರವರಿ 24: ಕೇರಳದ ಕೋಝಿಕ್ಕೊಡ್ ನಿಂದ ದಮ್ಮಾಮ್ ಗೆ ತೆರಳುತ್ತಿದ್ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆ ತಿರುವನಂತಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದು, ಪೈಲೆಟ್ ಮುಂಜಾಗೃತಾ ಕ್ರಮವಾಗಿ ಸುಮಾರು 2 ಗಂಟೆ ವಿಮಾನವನ್ನು ಆಕಾಶದಲ್ಲೇ ಸುತ್ತು ಹಾಕಿ ವಿಮಾನದ ಇಂಧನವನ್ನು ಖಾಲಿ ಮಾಡಲಾಗಿತ್ತು.
ಈ ವಿಮಾನದಲ್ಲಿ ಸುಮಾರು 168 ಮಂದಿ ಪ್ರಯಾಣಿಕರು ಇದ್ದು ಕೋಝಿಕ್ಕೋಡ್-ದಮ್ಮಾಮ್ ಗೆ ತೆರಳುತ್ತಿದ್ದು, ಟೇಕಾಫ್ ಆಗುತ್ತಿದ್ದ ವೇಳೆ ವಿಮಾನದ ಹಿಂಭಾಗ ರನ್ ವೇಗೆ ಬಡಿದಿರುವ ಶಂಕೆ ವ್ಯಕ್ತವಾಗಿದ್ದು, ಇದೇ ತಾಂತ್ರಿಕ ದೋಷಕ್ಕೆ ಕಾರಣ ಎನ್ನಲಾಗಿದೆ. ಟೇಕಾಪ್ ಆದ ಬಳಿಕ ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಮುಂದಾಗಿದ್ದರು.
ಮುಂಜಾಗ್ರತಾ ಕ್ರಮವಾಗಿ ವಿಮಾನದ ಪೈಲಟ್ ತುರ್ತು ಭೂಸ್ಪರ್ಶದ ವೇಳೆ ವಿಮಾನ ರನ್ ವೇ ಅಪ್ಪಳಿಸಿದರೆ ಇದರಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯಿಂದಾಗಿ ವಿಮಾನದಲ್ಲಿನ ಹೆಚ್ಚುವರಿ ಇಂಧನವನ್ನು ಸುಮಾರು 2 ಗಂಟೆ ಆಕಾಶದಲ್ಲೇ ಸುತ್ತು ಹೊಡೆದು ಖಾಲಿ ಮಾಡಿದ್ದರು ಎಂದು ಹೇಳಲಾಗಿದ್ದು, ಬಳಿಕವಷ್ಟೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಅದೃಷ್ಟ ವಶಾತ್ ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನು ವಿಮಾನ ತುರ್ತು ಭೂ ಸ್ಪರ್ಶದ ವೇಳೆ ತಿರುವನಂತಪುರ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಒಂದು ವೇಳೆ ವಿಮಾನ ಅಪಘಾತಕ್ಕೀಡಾದರೆ ತೆಗೆದುಕೊಳ್ಳಬೇಕಾದ ಎಲ್ಲ ರೀತಿಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಗ್ನಿಶಾಮಕವಾಹನಗಳು, ರಕ್ಷಣಾ ಸಿಬ್ಬಂದಿ ಸರ್ವ ಸನ್ನದ್ದತೆಯಲ್ಲಿ ಕಾರ್ಯಾಚರಣೆಗೆ ಸಿದ್ಧರಾಗಿದ್ದರು.
https://youtu.be/YJPbvsCmdqw