Connect with us

    DAKSHINA KANNADA

    ಬೀದಿ ನಾಯಿಗಳ ಅನ್ನದಾತೆ ರಜನಿ ಶೆಟ್ಟಿಗೆ ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿ

    ಮಂಗಳೂರು, ಫೆಬ್ರವರಿ 24: ಪ್ರತಿದಿನ 800ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಊಟ ಹಾಕುವ, ತನ್ನ ಮನೆಯಲ್ಲೇ 55 ಬೀಡಾಡಿ ನಾಯಿ, 15 ಬೆಕ್ಕು, 11 ಗಿಡುಗ, ದನ, ಕಾಗೆ, ಕೋಗಿಲೆ, ಆಮೆ, ಮೊಲಗಳನ್ನು ಸಾಕಿ ಸಲಹುತ್ತಿರುವ ಮಂಗಳೂರು ಬಲ್ಲಾಳ್‌ಬಾಗ್ ನಿವಾಸಿ ರಜನಿ ಶೆಟ್ಟಿ ಅವರನ್ನು ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    ಮಂಗಳೂರು ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿಯು 2022ನೇ ಸಾಲಿನ ಪ್ರಶಸ್ತಿಗೆ ರಜನಿ ಶೆಟ್ಟಿ ಅವರನ್ನು ಆಯ್ಕೆ ನಡೆಸಿದೆ. ಮಾ.5ರಂದು ಮಂಗಳೂರಿನ ಬೊಕ್ಕಪಟ್ಣ ಸಮೀಪದ ಪ್ಯಾರಡೈಸ್ ಐಲ್ಯಾಂಡ್‌ನಲ್ಲಿ ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆ ಸಮಾರಂಭದಲ್ಲಿ ರಜನಿ ಶೆಟ್ಟಿಯವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಯಾರು ಈ ರಜನಿ ಶೆಟ್ಟಿ?: ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಪುಟ್ಟ ಬಾಡಿಗೆ ಮನೆಯಲ್ಲಿ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿರುವ ರಜನಿ ಶೆಟ್ಟಿ, ತಮ್ಮ ಮನೆಯನ್ನು ಗಾಯಗೊಂಡ, ರೋಗಗ್ರಸ್ತ ನಾಯಿ, ಬೆಕ್ಕು, ಹಕ್ಕಿಗಳಿಗೆ ಮೀಸಲಿಟ್ಟಿದ್ದಾರೆ.

    ಬೀದಿ ಬದಿ ಬರಡಾಗುವ ಬದುಕು, ವಾಹನಗಳ ಅಡಿಗೆ ಸಿಲುಕಿಯೋ, ಯಾವುದಾದರೂ ವಿಷ ತಿಂದು ಸಾಯುವ ಪರಿಸ್ಥಿತಿಯ ಬೀದಿ ನಾಯಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ಮನಗಂಡು, ತಮ್ಮ ಪಾಡಿಗೆ ಸದ್ದಿಲ್ಲದೆ ಪ್ರಾಣಿಗಳ ಸೇವೆ ಮಾಡಿಕೊಂಡು ಬಂದವರು ರಜನಿ ಶೆಟ್ಟಿ.

    ನಾಯಿ, ಬೆಕ್ಕು ಬಾವಿಗೆ ಬಿದ್ದಾಗ ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಬರುವ ಮೊದಲೇ ದೂರವಾಣಿ ಕರೆ ಸ್ವೀಕರಿಸಿ, ಸರ ಸರನೆ ಬಾವಿಗಿಳಿದು ಮೇಲೆತ್ತುವುದರಲ್ಲಿ ರಜನಿ ಶೆಟ್ಟಿಯವರದ್ದು ಎತ್ತಿದ ಕೈ. ಅನೇಕ ನಾಯಿ, ಬೆಕ್ಕುಗಳನ್ನು ಅವರು ರಕ್ಷಣೆ ಮಾಡಿದ್ದಾರೆ. ಮರ ಕಡಿಯುವಾಗ ಗಾಯಗೊಂಡ ಹಕ್ಕಿಗಳನ್ನೂ ಅವರು ತಮ್ಮ ಮನೆಯ ಗೂಡಿನಲ್ಲಿರಿಸಿ ಆರೈಕೆ ಮಾಡುತ್ತಾರೆ. ಗಿಳಿ, ಹದ್ದುಗಳಿಗೂ ರಜನಿಯಕ್ಕನ ಮನೆಯಲ್ಲಿ ಆಸರೆ ಸಿಕ್ಕಿದೆ.

    ರಜನಿ ಅವರ ಮನೆಯಲ್ಲಿ ಪ್ರತಿದಿನ 60 ಕೆಜಿ ಅಕ್ಕಿಯಿಂದ ಚಿಕನ್ ಮಿಶ್ರಿತ ಅನ್ನ ಬೇಯುತ್ತಿರುತ್ತದೆ. ಇದನ್ನು ಅವರು 800ಕ್ಕೂ ಹೆಚ್ಚು ನಾಯಿಗಳಿಗೆ ಬಡಿಸುತ್ತಾರೆ. ಮಗಳು ಅಥವಾ ಪತಿ ದಾಮೋದರ್ ಶೆಟ್ಟಿಯವರ ಜೊತೆ ಸ್ಕೂಟರ್‌ನಲ್ಲಿ ತೆರಳಿ ನಾಯಿಗಳ ಮೈದಡವಿ, ಊಟ ಹಾಕಿ ಬರುತ್ತಾರೆ. ಗೂಡ್ಸ್ ಶೆಡ್‌ನಂತಹ ಮಂಗಳೂರಿನ ಮೂಲೆಗೂ ತೆರಳಿ, ಆಹಾರ ಹಾಕುತ್ತಾರೆ. ರಜನಿಯವರನ್ನು ಕಂಡ ಕೂಡಲೇ ನಾಯಿಗಳು ಬಾಲವನ್ನಾಡಿಸುತ್ತಾ ಓಡೋಡಿ ಬಂದು ಸುತ್ತುವರಿದು ಪ್ರೀತಿ ತೋರುತ್ತವೆ.

    16 ವರ್ಷಗಳಿಂದ ನಾಯಿಗಳಿಗೆ ಊಟ ಹಾಕುವ ಅವರು, 2500ರಷ್ಟು ಪ್ರಾಣಿಗಳನ್ನು ರಕ್ಷಿಸಿದ್ದಾರೆ. ಆರಂಭದಲ್ಲಿ ಸ್ವಂತ ದುಡಿಮೆಯ ಹಣದಿಂದ ನಾಯಿಗಳಿಗೆ ಊಟ ಬೇಯಿಸಿ ಹಾಕುತ್ತಿದ್ದರೆ, ಈಗ  ಬಿರುವೆರ್ ಕುಡ್ಲದಂತಹ ಸಂಘಟನೆಗಳು, ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply