LATEST NEWS
ಸತ್ತ ನಂತರ ಹೀರೋ ಆಗುವುದಕ್ಕೆ ಗೌರಿ ಲಂಕೇಶ್ ಸಾವೇ ಉದಾಹರಣೆ – ಚೈತ್ರಾ ಕುಂದಾಪುರ
ಸತ್ತ ನಂತರ ಹೀರೋ ಆಗುವುದಕ್ಕೆ ಗೌರಿ ಲಂಕೇಶ್ ಸಾವೇ ಉದಾಹರಣೆ – ಚೈತ್ರಾ ಕುಂದಾಪುರ
ಮಂಗಳೂರು ಸೆಪ್ಟೆಂಬರ್ 5: ಮಂಗಳೂರಲ್ಲಿ ಹಿಂದೂ ಜನಜಾಗೃತಿ ವತಿಯಿಂದ ಸನಾತನ ಸಂಸ್ಥೆಯನ್ನು ನಿಷೇಧಿಸದಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆ ನಾಯಕಿ ಚೈತ್ರ ಕುಂದಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತು ಮಾತನಾಡಿದ ಅವರು, ಸತ್ತ ಮೇಲೆ ಯಾವ ರೀತಿ ವ್ಯಕ್ತಿಯನ್ನ ಹೀರೋ ಮಾಡುತ್ತಾರೆ ಎನ್ನುವುದಕ್ಕೆ ಗೌರಿ ಲಂಕೇಶ್ ಸಾವೇ ಉದಾಹರಣೆ.
ಗೌರಿ ಲಂಕೇಶ್ ಸತ್ತಾಗ ಕರ್ನಾಟಕದ ಒಬ್ಬ ಪತ್ರಕರ್ತ ಬರಿತಾನೆ. ಗೌರಿ ಗುಂಡೇಟಿನಿಂದ ಸಾಯುವ ಬದಲು ಗುಂಡು ಹಾಕಿ ಸತ್ತಿದ್ದರೆ ಸಿಂಗಲ್ ಕಾಲಂ ನ್ಯೂಸ್ ಹಾಕ್ತಿತ್ತು ಎಂದು ಬರೆದಿದ್ದ ಎಂಬ ಹೇಳಿಕೆಯನ್ನ ಉಲ್ಲೇಖಿಸಿ ವ್ಯಂಗ್ಯವಾಗಿ ಮಾತನ್ನಾಡಿದ್ರು. ಅಂದರೆ ಸತ್ತ ವ್ಯಕ್ತಿಯನ್ನ ಸಮಾಜ ಹೇಗೆ ಮಾಡುತ್ತೆ ಅನ್ನುವುದಕ್ಕೆ ಗೌರಿ ಲಂಕೇಶ್ ಉದಾಹರಣೆ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಗತಿಪರರು ಹೆಣ ಬಿದ್ದರೂ ಕೂಡ ಸ್ವಾರ್ಥಪ್ರೇರಿತವಾದ ದುರುದ್ದೇಶದಿಂದ ರಸ್ತೆಗಿಳಿದು ಪ್ರತಿಭಟಿಸುತ್ತಾರೆ. ಅಷ್ಟೇ ಅಲ್ಲದೇ ತನಿಖಾ ವ್ಯವಸ್ಥೆಯ ಮೇಲೆ ಒತ್ತಡ ನಿರ್ಮಾಣ ಮಾಡಿ ತನಿಖೆಯ ದಿಕ್ಕನ್ನು ಬದಲಾಯಿಸುತ್ತಿದ್ದಾರೆ. ಆದರೆ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಇದೇ ಪ್ರಗತಿಪರರು ಧ್ವನಿಯೆತ್ತುವುದಿಲ್ಲ ಎಂದು ಆರೋಪಿಸಿದರು.
ಇನ್ನು ದಿಲ್ಲಿಯ ಜೆ ಎನ್ ಯು ಸಂಸ್ಥೆ ಭಯೋತ್ಪಾದಕರನ್ನು ಹುಟ್ಟು ಹಾಕುತ್ತಿದೆ. ಅಲ್ಲಿ ವ್ಯಾಸಾಂಗ ಮಾಡಿ ಹೊರ ಬರುವ ವಿದ್ಯಾರ್ಥಿಗಳು ಭಯೋತ್ಪಾದಕರು ಎಂದು ಆರೋಪಿಸಿದ ಅವ್ರು ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುವವರನ್ನು ಈ ವಿದ್ಯಾಸಂಸ್ಥೆ ತಯಾರಿಸುತ್ತದೆ ಎಂದು ವಿವಾದದ ಬಾಂಬ್ ಸಿಡಿಸಿದ್ದಾರೆ. ದೇವರ ಹುಂಡಿಗೆ ಕಾಣಿಕೆಯಾದ್ರೂ ನಾವು ಹೆಚ್ಚು ಹಾಕುತ್ತೇವೆ. ಆದರೆ ಈ ವಿದ್ಯಾಲಯದಲ್ಲಿ 11 ರೂಪಾಯಿಗೆ ವಿದ್ಯಾರ್ಜನೆ ಕೊಡುತ್ತಾರಂತೆ. ಯಾವ ರೀತಿಯ ವಿದ್ಯಾಭ್ಯಾಸ 11 ರೂಪಾಯಿಗೆ ಕೊಡುತ್ತಾರೋ ಗೊತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.
ಹಿಂದೂ ಶಕ್ತಿಯನ್ನು ಸಹಿಸದೇ ಹಿಂದೂಗಳ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಸನಾತನ ಸಂಸ್ಥೆಯನ್ನು ಆರೋಪಿಯೆಂದು ಹೇಳಿ ಸನಾತನದ ಆಶ್ರಮಗಳನ್ನು ತನಿಖೆ ಮಾಡಿದರೆ ಕೇವಲ ಸಂತರ ಸತ್ಸಂಗ ಸಿಗಬಹುದು ವಿನಃ ಆರೋಪಿಗಳಲ್ಲ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.