LATEST NEWS
ತೆಲುಗು ಮಾತನಾಡುವವರ ವಿರುದ್ದ ಆಕ್ಷೇಪಾರ್ಹ ಹೇಳಿಕೆ – ನಟಿ ಕಸ್ತೂರಿ ಶಂಕರ್ ಅರೆಸ್ಟ್
ಚೆನ್ನೈ ನವೆಂಬರ್ 16: ಕಾರ್ಯಕ್ರಮವೊಂದರಲ್ಲಿ ತೆಲುಗು ಮಾತನಾಡುವವರ ವಿರುದ್ದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿರಿಯ ನಟಿ ಕಸ್ತೂರಿ ಶಂಕರ್ ಅವರನ್ನು ಹೈದರಾಬಾದ್ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.
ನಟಿ ಕಸ್ತೂರಿ ಶಂಕರ್ ವಿರುದ್ಧ ಕೆಲ ದಿನಗಳ ಹಿಂದೆ ಚೆನ್ನೈ ಸೇರಿದಂತೆ ತಮಿಳುನಾಡಿನ ಇನ್ನೂ ಕೆಲವು ಕಡೆ ದೂರು ದಾಖಲಾಗಿತ್ತು. ಅದರ ಬೆನ್ನಲ್ಲೇ ನಟಿ ಕಸ್ತೂರಿ ಶಂಕರ್ ರಾಜ್ಯ ಬಿಟ್ಟು ಪರಾರಿಯಾಗಿದ್ದರು. ಅದರ ಜೊತೆಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರಾದರೂ ಸಹ ನ್ಯಾಯಾಲಯವು ಅರ್ಜಿ ನಿರಾಕರಿಸಿದ ಬೆನ್ನಲ್ಲೇ ಇದೀಗ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 3 ರಂದು ಕಾರ್ಯಕ್ರಮವೊಂದರಲ್ಲಿ ತೆಲುಗು ಮಾತನಾಡುವವರ ವಿರುದ್ದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಬಳಿಕ ಕ್ಷಮೆಯಾಚಿಸಿದ್ದರು. ಅಲ್ಲದೆ ಅವರ ವಿರುದ್ದ ಹಲವೆಡೆ ಪ್ರಕರಣ ದಾಖಲಾಗಿತ್ತು, ಇದಕ್ಕೂ ಮುನ್ನ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ, ನಟಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ನಟಿಯ ಹೇಳಿಕೆಗಳು ದ್ವೇಷ ಭಾಷಣದಿಂದ ಕೂಡಿವೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವ ಮುನ್ನ ಎರಡು ಬಾರಿ ಯೋಚಿಸಬೇಕು ಎಂದು ಪೀಠ ಹೇಳಿತ್ತು. ಅಲ್ಲದೇ ಕ್ಷಮೆ ಕೇಳಿದ ಮಾತ್ರಕ್ಕೆ ಇಂತಹ ಕ್ರಮಗಳಿಂದ ವಿನಾಯ್ತಿ ನೀಡಲಾಗುವುದಿಲ್ಲ ಎಂದೂ ಕೋರ್ಟ್ ಹೇಳಿತ್ತು.