FILM
ಹೆಬ್ಬುಲಿ ನಟಿ ಅಮಲಾ ಪೌಲ್ ಗೆ ಲೈಂಗಿಕ ಕಿರುಕುಳ
ಹೆಬ್ಬುಲಿ ನಟಿ ಅಮಲಾ ಪೌಲ್ ಗೆ ಲೈಂಗಿಕ ಕಿರುಕುಳ
ಚೆನ್ನೈ ಫೆಬ್ರವರಿ 1: ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಕನ್ನಡದಲ್ಲಿ ಸುದೀಪ್ ಜೊತೆ ಹೆಬ್ಬುಲಿಯಲ್ಲಿ ನಟಿಸಿದ್ದ ಅಮಲಾ ಪೌಲ್ ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಚೆನ್ನೈನ ಟಿ ನಗರ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲು ಮಾಡಿದ್ದಾರೆ. ಮಲೇಷ್ಯಾದಲ್ಲಿ ನಡೆಯಲಿರುವ ಕಾರ್ಯಕ್ರಮದ ನಿಮಿತ್ತ ನಟಿ ಅಮಲಾ ಚೆನ್ನೈನಲ್ಲಿ ನೃತ್ಯ ತರಬೇತಿ ನಡೆಸುತ್ತಿರುವ ಸಂದರ್ಭದಲ್ಲಿ ಸ್ಟುಡಿಯೋಗೆ ಬಂದ ಅನಾಮಿಕ ವ್ಯಕ್ತಿಯೋರ್ವ ನಟಿ ಅಮಲಾ ಪೌಲ್ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಲೈಂಗಿಕವಾಗಿ ಬಳಸಿಕೊಳ್ಳುವ ಕುರಿತು ಮಾತನಾಡಿದ್ದಾನೆ ಎಂದು ನಟಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಕಾಲಿವುಡ್ ಖ್ಯಾತ ನೃತ್ಯ ನಿರ್ದೇಶಕ ಶ್ರೀಧರ್ ಅವರ ನೇತೃತ್ವದಲ್ಲಿ ಈ ನೃತ್ಯ ತರಬೇತಿ ನಡೆಯುತ್ತಿತ್ತು ಎಂದು ತಿಳಿದುಬಂದಿದ್ದು, ಈ ಘಟನೆ ನಡೆದ ಸಂದರ್ಭದಲ್ಲಿ ಶ್ರೀಧರ್ ಅವರು ಸ್ಥಳದಲ್ಲಿರಲಿಲ್ಲ ಎನ್ನಲಾಗಿದೆ. ನೃತ್ಯ ತರಬೇತಿಯಲ್ಲಿ ನಟಿ ಪಾಲ್ಗೊಳ್ಳುವ ಕುರಿತು ಅಲ್ಲಿನ ಸಿಬ್ಬಂದಿಗಳೇ ಮಾಹಿತಿ ಸೋರಿಕೆ ಮಾಡಿರಬಹುದು. ಹೀಗಾಗಿ ಹೊರಗಡೆಯಿಂದ ದುಷ್ಕರ್ಮಿ ನುಸುಳಿರಬಹುದು ಎಂದು ಆಯೋಜಕರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಟಿ ಅಮಲಾ, ಡ್ಯಾನ್ಸ್ ರಿಹರ್ಸಲ್ ಮಾಡುವಾಗ ತನ್ನ ಬಳಿ ಬಂದ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ. ನನ್ನನ್ನು ಲೈಂಗಿಕ ಬಳಸಿಕೊಳ್ಳುವ ಕುರಿತು, ಬೇರೊಬ್ಬರಿಗೆ ಮಾರಾಟ ಮಾಡುವ ಕುರಿತು ಅಸಭ್ಯವಾಗಿ ಮಾತನಾಡಿದ. ಅಲ್ಲದೆ ತನ್ನ ಲೈಂಗಿಕ ಕಾಮನೆಗಳನ್ನು ತೀರಿಸುವಂತೆ ಕೇಳಿದ.
ಆತನ ಮಾತುಗಳನ್ನು ಕೇಳಿ ನಿಜಕ್ಕೂ ನಾನು ಆಘಾತಕ್ಕೊಳಗಾದೆ. ಇದೇ ಕಾರಣಕ್ಕೆ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ನಟಿ ಅಮಲಾ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಒಂಟಿ ಉದ್ಯೋಗಸ್ಥ ಮಹಿಳೆಯರಿಗೆ ಭದ್ರತೆ ಬೇಕು ಎಂದು ಹೇಳಿದ್ದಾರೆ.
You must be logged in to post a comment Login