FILM
8 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರಿಗೆ ತೆರಿಗೆ ವಿನಾಯಿತಿ ಕೇಳಿದ ತಮಿಳು ನಟ ವಿಜಯ್ – ಮದ್ರಾಸ್ ಹೈಕೋರ್ಟ್ ಛೀಮಾರಿ
ಚೆನ್ನೈ : 8 ಕೋಟಿ ಬೆಲೆ ಬಾಳುವ ರೋಲ್ಸ್ ರಾಯ್ಸ್ ಕಾರಿಗೆ ತೆರಿಗೆ ಕಟ್ಟಲು ವಿನಾಯಿತಿ ಕೇಳಿದ ತಮಿಳು ಸೂಪರಸ್ಟಾರ್ ನಟ ವಿಜಯ್ ಗೆ ಮದ್ರಾಸ್ ಹೈಕೋರ್ಟ್ ಕ್ಲಾಸ್ ತೆಗೆದುಕೊಂಡಿದ್ದು, ಕೋರ್ಟ್ ಸಮಯ ಹಾಳು ಮಾಡಿದ್ದಕ್ಕೆ 1 ಲಕ್ಷ ದಂಡ ವಿಧಿಸಿದೆ.
2012ರಲ್ಲಿ ಇಂಗ್ಲೆಂಡ್ ನಿಂದ ಆಮದು ಮಾಡಿಕೊಂಡ ಸುಮಾರು 8 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರಿಗೆ ತೆರಿಗೆ ವಿನಾಯಿತಿಯನ್ನು ಕೋರಿ ತಮಿಳು ನಟ ಮದ್ರಾಸ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು, ತೆರಿಗೆ ವಿನಾಯಿತಿಯ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‍ನ ನ್ಯಾ.ಎಸ್.ಎಮ್.ಸುಬ್ರಮಣಿಯಮ್ ಅವರಿದ್ದ ಪೀಠವು, ನಿಜವಾದ ಹೀರೋಗಳು ಸರಿಯಾದ ಸಮಯಕ್ಕೆ ತೆರಿಗೆ ಕಟ್ಟುತ್ತಾರೆ. ನೀವು ನಿಜ ಜೀವನದ ಹೀರೋಗಳಾಗಿ, ಬರಿಯ ತೆರೆಯ ಮೇಲಿನ ಹೀರೋಗಳಾಗಿ ಉಳಿಯಬೇಡಿ ಎಂದು ವಿಜಯ್ ಅವರಿಗೆ ಛಾಟಿ ಬೀಸಿದೆ. ಜೊತೆಗೆ ನ್ಯಾಯಾಲಯವು 1ಲಕ್ಷ ರೂ.ಗಳ ದಂಡವನ್ನೂ ವಿಜಯ್‍ಗೆ ವಿಧಿಸಿದ್ದು, ಅದನ್ನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸುವಂತೆ ತಿಳಿಸಿದೆ.
ವಿಜಯ್ ಅವರ ವರ್ತನೆಯು ಬಹಳ ಜನರನ್ನು ಪ್ರಭಾವಿಸುವ ಸಾಮರ್ಥ್ಯವನ್ನು ಹೊಂದಿದೆ. ತಮಿಳುನಾಡಿನಂತಹ ರಾಜ್ಯದಲ್ಲಿ ಚಿತ್ರ ನಟರು ಬೇರೆಲ್ಲರಿಗಿಂತ ಹೆಚ್ಚು ಜನರನ್ನು ಪ್ರಭಾವಿಸುತ್ತಾರೆ. ನಟರೇ ಹೀಗೆ ಮಾಡಿದರೆ ತಪ್ಪು ಸಂದೇಶ ಹೋದಂತಾಗುತ್ತದೆ. ನಿಜವಾದ ನಾಯಕನಾದವನು ದೇಶಕ್ಕೆ ಕಟ್ಟಬೇಕಾದ ತೆರಿಗೆಯನ್ನು ತಪ್ಪದೇ ಕಟ್ಟುತ್ತಾನೆ ಎಂದಿದೆ.
ರಿಟ್ ಅರ್ಜಿಯಲ್ಲಿ ವಿಜಯ್ ತಮ್ಮ ಉದ್ಯೋಗವನ್ನು ನಮೂದಿಸದೇ ಇದ್ದದ್ದನ್ನು ಗಮನಿಸಿದ ನ್ಯಾಯಾಲಯವು ಅದನ್ನೂ ಪ್ರಶ್ನಿಸಿದೆ. ಇಷ್ಟು ದೊಡ್ಡ ಹಿಂಬಾಲಕ ಗಡಣವನ್ನೇ ಹೊಂದಿದ್ದರೂ ನಿಮ್ಮ ಉದ್ಯೋಗದ ಕಾಲಂ ಅನ್ನು ಖಾಲಿ ಬಿಟ್ಟಿದ್ದಾರೆ. ಅಲ್ಲದೇ ರಿಟ್ ಅರ್ಜಿ ಸಲ್ಲಿಸಿ ಒಂಬತ್ತು ವರ್ಷಗಳ ಕಾಲ ನ್ಯಾಯಾಲಯದ ಸಮಯವನ್ನೂ ವ್ಯರ್ಥ ಮಾಡಿದ್ದೀರಿ. ಆಮದು ಸುಂಕ ಕಟ್ಟಿದ್ದೀರೋ, ಇಲ್ಲವೋ ಎಂಬುದನ್ನೂ ಸ್ಪಷ್ಟಪಡಿಸಿಲ್ಲ ಎಂದು ವಿಜಯ್ ಮೇಲೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ಅಲ್ಲದೆ ದೇಶದ ಬಡ ಜನರ ರಕ್ತ ಹಾಗೂ ಕಠಿಣ ಶ್ರಮದ ಫಲದಿಂದಾಗಿ ಶ್ರೀಮಂತ ವ್ಯಕ್ತಿಗಳಲ್ಲಿ ಹಣವು ಶೇಖರಣೆಯಾಗಿದೆಯೇ ವಿನಃ, ಆಕಾಶದಿಂದ ಹಣ ಉದುರಿದ ಕಾರಣದಿಂದಲ್ಲ ಎಂದು ಹೇಳಿದೆ.