Connect with us

    FILM

    ವಯನಾಡಿಗೆ ಮಿಲಿಟರಿ ಸಮವಸ್ತ್ರದಲ್ಲಿ ಭೇಟಿ ಕೊಟ್ಟ ನಟ ಮೋಹನ್​ಲಾಲ್: 3 ಕೋಟಿ ನೆರವು

    ವಯನಾಡ್, ಆಗಸ್ಟ್ 03: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಗುಡ್ಡ ಕುಸಿತ 350ಕ್ಕೂ ಹೆಚ್ಚು ಜನರ ಜೀವ ಬಲಿ ಪಡೆದಿದೆ. ಕರ್ನಾಟಕ ಸರ್ಕಾರ ಸೇರಿದಂತೆ ಹಲವು ಸಂಘ-ಸಂಸ್ಥೆಗಳು, ಉದ್ಯಮಿಗಳು ಇನ್ನಿತರರು ನೆರವಿಗೆ ಧಾವಿಸಿದ್ದಾರೆ. ಚಿತ್ರರಂಗದ ಗಣ್ಯರು ಸಹ ಕೇರಳದ ನೆರವಿಗೆ ಧಾವಿಸಿದ್ದು, ಈ ನಡುವೆ ಇಂದು ವಯನಾಡಿಗೆ ಮಿಲಿಟರಿ ವೇಷ ಧರಿಸಿ ಭೇಟಿ ನೀಡಿರುವ ನಟ ಮೋಹನ್​ಲಾಲ್ ಸ್ಥಳದಲ್ಲೇ ಮೂರು ಕೋಟಿ ರೂಪಾಯಿ ನೆರವು ಘೋಷಣೆ ಮಾಡಿದ್ದಾರೆ.

    ನಟ ಮೋಹನ್​ಲಾಲ್, ಲೆಫ್ಟನೆಂಟ್ ಕರ್ನಲ್ ಸಮವಸ್ತ್ರದಲ್ಲಿ ಧರಿಸಿ ವಯನಾಡಿಗೆ ಭೇಟಿ ನೀಡಿದ್ದರು, ಕಾರಣ, ಮೋಹನ್​ಲಾಲ್ ನಟರಾಗಿರುವ ಜೊತೆಗೆ ಭಾರತೀಯ ಟೆರಟೋರಿಯಲ್ ಸೈನ್ಯದ ಲೆಫ್ಟನೆಂಟ್ ಕರ್ನಲ್ ಸಹ ಆಗಿದ್ದಾರೆ. ಭಾರತೀಯ ಟೆರಟೋರಿಯಲ್ ಸೈನ್ಯವೇ ಕೇರಳದ ವಯನಾಡಿನಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು, ಲೆಫ್ಟನೆಂಟ್ ಕರ್ನಲ್ ಆಗಿರುವ ಮೋಹನ್​ಲಾಲ್ ಇಂದು ವಯನಾಡಿಗೆ ಕರ್ನಲ್ ಸಮವಸ್ತ್ರ ಧರಿಸಿ ಭೇಟಿ ನೀಡಿದ್ದರು. ಜೊತೆಗೆ ರಕ್ಷಣಾ ಕಾರ್ಯಗಳ ಖರ್ಚಿಗೆ ಬರೋಬ್ಬರಿ 3 ಕೋಟಿ ರೂಪಾಯಿ ಸಹಾಯಧನವನ್ನು ಘೋಷಿಸಿದರು.

    ಗುಡ್ಡ ಕುಸಿತದಿಂದ ತೀವ್ರ ಹಾನಿ ಸಂಭವಿಸಿರುವ ಮಂಡಕೈ, ಚೂರಲಮಾಲ, ಪುಂಚಿರಿಮಟ್ಟನ್ ಇನ್ನೂ ಕೆಲವು ಸ್ಥಳಗಳಿಗೆ ಮೋಹನ್​ಲಾಲ್ ಭೇಟಿ ನೀಡಿದರು. ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸೈನ್ಯಾಧಿಕಾರಿಗಳು ಮೋಹನ್​ಲಾಲ್ ಅವರಿಗೆ ಪರಿಸ್ಥಿತಿಯ ವಿವರಣೆ ನೀಡಿದರು. ಈ ವೇಳೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸೈನಿಕರು, ಸ್ವಯಂ ಸೇವಕರು, ಸ್ಥಳೀಯ ರಕ್ಷಣಾ ಪಡೆಗಳೊಂದಿಗೆ ಮೋಹನ್​ನಾಲ್ ಮಾತನಾಡಿ, ಅವರ ಕಾರ್ಯಕ್ಕೆ ಮೆಚ್ಚುಗೆ ತುಂಬಿದರು. ಮಾತ್ರವಲ್ಲದೆ ಸಂತ್ರಸ್ತರ ಕುಟುಂಬವನ್ನು ಸಹ ಮೋಹನ್​ಲಾಲ್ ಈ ಕ್ಷಣ ಭೇಟಿಯಾದರು.

    ಭೇಟಿಯ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಮೋಹನ್​ನಾಲ್, ‘ಭಾರತೀಯ ಸೈನ್ಯದ ವಿವಿಧ ದಳಗಳು, ಎನ್​ಡಿಆರ್​ಎಫ್, ಅಗ್ನಿ ಶಾಮಕ ದಳ, ಸ್ಥಳೀಯರು ಮತ್ತು ಸ್ವಯಂ ಸಂಘಗಳು ಎಲ್ಲವೂ ಸೇರಿ ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ. ನಾನು ಭಾಗವಾಗಿರುವ ಇನ್​ಫ್ಯಾಂಟರಿ ಬೆಟಾಲಿಯನ್​ನ 122 ಮಂದಿ ಸುರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ದುರ್ಘಟನೆ ನಡೆದ ಬಳಿಕ ಮೊದಲು ರಕ್ಷಣೆಗೆ ಆಗಮಿಸಿದ ಬೆಟಾಲಿಯನ್ ಅದೇ ಆಗಿತ್ತು. ನಾನು ಭಾಗವಾಗಿರುವ ವಿಶ್ವಶಾಂತಿ ಫೌಂಡೇಷನ್ ವತಿಯಿಂದ ಮೂರು ಕೋಟಿ ರೂಪಾಯಿ ನೆರವು ನೀಡಲಾಗುತ್ತಿದ್ದು, ಇನ್ನೂ ದೇಣಿಗೆಯ ಅವಶ್ಯಕತೆ ಇದೆ’ ಎಂದಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *