UDUPI
ತಾಯಿ ಹಾಗೂ ಶಿಶು ಮರಣ ತಡೆಗಟ್ಟಲು ಕ್ರಮ ಕೈಗೊಳ್ಳಿ- ಜಿಲ್ಲಾಧಿಕಾರಿ

ತಾಯಿ ಹಾಗೂ ಶಿಶು ಮರಣ ತಡೆಗಟ್ಟಲು ಕ್ರಮ ಕೈಗೊಳ್ಳಿ- ಜಿಲ್ಲಾಧಿಕಾರಿ
ಉಡುಪಿ, ಸೆಪ್ಟೆಂಬರ್ 25 : ಜಿಲ್ಲೆಯಲ್ಲಿ ಗರ್ಭಿಣಿ ತಾಯಂದಿರ ಮತ್ತು ನವಜಾತ ಶಿಶುಗಳ ಮರಣ ತಡೆಗಟ್ಟುವ ಕುರಿತಂತೆ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.
ಅವರು ಸೋಮವಾರ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಪ್ರಗತಿ ಪರಿಶೀಲನಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಯಂದಿರ ಮತ್ತು ನವಜಾತ ಶಿಶುಗಳ ಮರಣ ತಡೆಗಟ್ಟುಲು ಇಲಾಖೆಯ ಎಲ್ಲಾ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗರ್ಬಿಣಿಯರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವಂತೆ, ಪೌಷ್ಠಿಕ ಆಹಾರದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಈ ವರ್ಷ ಇದುವರೆವಿಗೆ ವಿವಿಧ ಕಾರಣಗಳಿಂದಾಗಿ 57 ಶಿಶು ಮರಣ ಹಾಗೂ 7 ತಾಯಿ ಮರಣ ಸಂಭವಿಸಿದ್ದು, ಜನಿಸಿದ ಮಕ್ಕಳಿಗೆ ತಕ್ಷಣದಿಂದ ಎದೆ ಹಾಲು ನೀಡುವ ಬಗ್ಗೆ ಎಲ್ಲಾ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಅರಿವು ಮೂಡಿಸಿ ಎಂದು ಸೂಚಿಸಿದರು.

ಅಕ್ಟೋಬರ್ 2 ರಿಂದ ಮಾತೃಪೂರ್ಣ ಯೋಜನೆ
ಜಿಲ್ಲೆಯಲ್ಲಿ ಅಕ್ಟೋಬರ್ 2 ರಿಂದ ಮಾತೃಪೂರ್ಣ ಯೋಜನೆ ಪ್ರಾರಂಭವಾಗಲಿದ್ದು, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಸಮೀಪದ ಅಂಗನವಾಡಿಯಲ್ಲಿಯೇ ಪೌಷ್ಠಿಕ ಆಹಾರ ತಯಾರಿಸಿ, ಅಲ್ಲಿಯೇ ನೀಡಲು ಕ್ರಮ ಕೈಗೊಳ್ಳಲಾಗಿದೆ, ಉದ್ಯೋಗಸ್ಥ ಮಹಿಳೆಯರು ತಾವು ಕೆಲಸ ಮಾಡುವ ಸ್ಥಳದಲ್ಲಿನ ಸಮೀಪದ ಅಂಗನವಾಡಿಯಲ್ಲಿ ಈ ಯೋಜನೆಯ ಪ್ರಯೋಜನ ದೊರೆಯುವಂತೆ ಮಾಡಲು ಸೂಚನೆ ನೀಡಲಾಗಿದೆ, ಅಂಗನವಾಡಿಯಿಂದ ದೂರದಲ್ಲಿರುವ ಗ್ರಾಮದಲ್ಲಿನ ಮಹಿಳೆಯರಿಗೆ ಸೈಕಲ್ ನಲ್ಲಿ ಡಬ್ಬಾವಾಲ ಮಾದರಿಯಲ್ಲಿ ಮನೆಗೆ ಆಹಾರ ತಲುಪಿಸಲು ಚಿಂತನೆ ನಡೆಸಲಾಗಿದೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸ್ವಚ್ಛತಾ ಸೇವೆಯ ಪಾಕ್ಷಿಕ ಆಚರಣೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಸ್ಚಚ್ಛತಾ ಕಾರ್ಯ ನೆಡಿಸಿ, ಅತ್ಯುತ್ತಮವಾಗಿ ಸ್ವಚ್ಛತೆ ಹೊಂದಿರುವ ಕೇಂದ್ರಗಳಿಗೆ ಬಹುಮಾನ ವಿತರಿಸುವಂತೆ ಡಿಹೆಚ್‍ಓ ಡಾ. ರೋಹಿಣಿ ಅವರಿಗೆ ಜಿಲ್ಲಾಧಿಕಾರಿ ತಿಳಿಸಿದರು.