LATEST NEWS
ಮೂಡಬಿದಿರೆ ತಾಲೂಕು ಕಚೇರಿಗೆ ಎಸಿಬಿ ದಾಳಿ

ಮೂಡಬಿದಿರೆ ತಾಲೂಕು ಕಚೇರಿಗೆ ಎಸಿಬಿ ದಾಳಿ
ಮಂಗಳೂರು ಅಕ್ಟೋಬರ್ 14: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕು ಕಚೇರಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಂದು ಡೀಡೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ನಾಗರಿಕರೊಬ್ಬರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ ಎಸಿಬಿ ಹಿರಿಯ ಅಧಿಕಾರಿಗಳ ತಂಡ ಕಚೇರಿಯ ಅಟಲ್‍ಜೀ ಜನಸ್ನೇಹಿ ವಿಭಾಗ,ಸರ್ವೆ ವಿಭಾಗ ಹಾಗೂ ಉಪ ತಹಸೀಲ್ದಾರ್ ಕಚೇರಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹಿತ ಎಂಟು ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ಸಂದರ್ಭ ಸುಮಾರು 66 ಸಾವಿರ ಹೆಚ್ಚುವರಿ ನಗದು ಹಣ ಪತ್ತೆಯಾಗಿದೆ.

ಕಾರವಾರ, ಉಡುಪಿ, ಚಿಕ್ಕಮಗಳೂರು ವಿಭಾಗಗಳ ಒಬ್ಬರು ಎಸ್‍ಪಿ, ಐದು ಮಂದಿ ನಿರೀಕ್ಷಕರು, ಏಳು ಮಂದಿ ಹೆಡ್‍ಕಾನ್ಸ್‍ಟೇಬಲ್, ನಾಲ್ಕು ಕಾನ್ಸಟೇಬಲ್ ಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಸಿಬಿ ಪ್ರಭಾರ ಎಸ್‍ಪಿ ಸುಧೀರ್ ಹೆಗ್ಡೆ ಮೂಡುಬಿದಿರೆ ಎಸಿಬಿಗೆ ಕಂಡು ಬಂದ ಮೊದಲ ಪ್ರಕರಣವಾಗಿದ್ದು, ಅಲ್ಪ ಪ್ರಮಾಣದ ಹೆಚ್ಚುವರಿ ನಗದು ಪತ್ತೆಯಾಗಿದೆ. ಈ ಬಗ್ಗೆ ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗಳು ಸಮಜಾಯಿಸಿ ನೀಡಿದ್ದು ತನಿಖೆ ನಡೆಸುತ್ತೇವೆ. ಒಂದು ವೇಳೆ ಸೂಕ್ತ ದಾಖಲೆಗಳಿಲ್ಲದ ಹಣವಾಗಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.