ಮಾದಕ ವಸ್ತು ಕೋಕೆನ್ ಮಾರಾಟಕ್ಕೆ ಯತ್ನ ಮೂವರ ಬಂಧನ

ಮಂಗಳೂರು ಅಕ್ಟೋಬರ್ 14: ಮಾದಕ ವಸ್ತು ಕೋಕೆನ್ ನ್ನು ಮಾರಾಟ ಮಾಡಲು ಯತ್ನಿಸುದ್ದ ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮಂಗಳೂರು ಪಳ್ನೀರ್‌ನ ಫಾಸೀಮ್ ನೌಷಿಬ್ (25), ಮಹಮ್ಮದ್ ಝಾಹಿದ್ (26) ಮಂಜೇಶ್ವರ ಕುಂಜೆತ್ತೂರಿನ ಅಪ್ಜಲ್ ಹುಸೈನ್ (28) ಎಂದು ಗುರುತಿಸಲಾಗಿದೆ.

ಆರೋಪಿಗಳನ್ನು ಮಂಗಳೂರು ನಗರದ ಪಡೀಲ್ ಕಂಕನಾಡಿ ಜಂಕ್ಷನ್ ರೈಲ್ವೇ ಸಿಬ್ಬಂದಿಗಳ ಸ್ಟಾಪ್ ಕ್ವಾಟ್ರಸ್ ಬಳಿ ಕಾರಿನ ಸಮೇತ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅವರಿಂದ 30 ಗ್ರಾಂ ತೂಕದ ರೂ. 2,40,000/- ಮೌಲ್ಯದ ನಿಷೇಧಿತ ಮಾದಕ ವಸ್ತುವಾದ ಕೋಕೆನ್, 4 ಮೊಬೈಲ್ ಫೋನ್, ಮಾರುತಿ ಕಂಪೆನಿಯ ಸ್ವೀಪ್ಟ್ ಕಾರು ಸೇರಿದಂತೆ ಅಂದಾಜು ಒಟ್ಟು ಮೌಲ್ಯ ರೂ. 10,000,00/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಇಕಾನಾಮಿಕ್ ಆ್ಯಂಡ್ ನಾರ್ಕೋಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕ ವಸ್ತುವಿನ ಮಾರಾಟದ ಜಾಲದಲ್ಲಿ ಇನ್ನೂ ಇತರರು ಭಾಗಿಯಾಗಿದ್ದು, ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.