LATEST NEWS
ತೃಣದಿಂದ ಮೇಲೆದ್ದು ಬಂದವರು ಅಬ್ದುಲ್ ಕಲಾಂ
ಮಂಗಳೂರು, ಜುಲೈ 28: ಮನುಷ್ಯ ಕನಸು ಕಾಣುವುದು ಸಹಜ. ಆದರೆ ಕನಸನ್ನು ನನಸು ಮಾಡಬೇಕಿದ್ದರೆ ಕಠಿಣ ಪರಿಶ್ರಮ, ಅಚಲ ವಿಶ್ವಾಸ, ದೃಢವಾದ ಕಾರ್ಯತತ್ಪರತೆ, ನಿಷ್ಠೆಯ ಮನೋಭಾವ ಅಗತ್ಯ. ಇಂಥ ಜೀವನ ಶೈಲಿ ರೂಢಿಸಿಕೊಂಡರೆ ನಮ್ಮ ಕನಸನ್ನು ನನಸು ಮಾಡಲು ಸಾಧ್ಯ. ಇದಕ್ಕೆ ಡಾ.ಎಪಿಜೆ ಅಬ್ದುಲ್ ಕಲಾಂರವರ ಜೀವನ ಮಾದರಿ ಎಂದು ಕೆನರಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಪಿ.ಅನಂತಕೃಷ್ಣ ಭಟ್ ಹೇಳಿದರು.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮಂಗಳೂರಿನ ಉರ್ವಾ ಸ್ಟೋರ್ ನಲ್ಲಿ ನಡೆದ ‘ಕಲಾಂ ಕಲ್ಪನೆಯ ಭಾರತ- 2020’ ವಿಚಾರದ ಬಗ್ಗೆ ಅವರು ಉಪನ್ಯಾಸ ನೀಡಿದರು.
ಕಲಾಂರವರು ಬಾಲ್ಯದಿಂದ ನಿವೃತ್ತಿಯ ವಯಸ್ಸಿನ ವರೆಗೂ ಹಲವಾರು ಸಮಸ್ಯೆಗಳನ್ನು ಎದುರಿಸಿದರೂ, ಯಾವುದೇ ಕ್ಷಣದಲ್ಲೂ ಹಿಮ್ಮುಖರಾಗದೆ ಧೈರ್ಯದಿಂದ ಎದುರಿಸಿ ಜಯಶಾಲಿಯಾದವರು. ಅವರ ಕಠಿಣ ಪರಿಶ್ರಮದಿಂದಲೇ ಇಡೀ ಜಗತ್ತು ಭಾರತ ದೇಶವನ್ನು ತನ್ನತ್ತ ನೋಡುವಂತಾಗಿದೆ. 1998ರ ಪೋಖ್ರಾಣ್ ಸ್ಫೋಟದ ನಂತರವಂತೂ ಭಾರತ, ಜಗತ್ತಿನ ಬೃಹತ್ ಶಕ್ತಿಗಳ ಮುಂದೆ ತಲೆಯೆತ್ತಿ ನಿಲ್ಲುವಂತಾಗಿತ್ತು. ಅಷ್ಟೇ ಅಲ್ಲದೆ, ಡಿಆರ್ ಡಿಓ ಸಂಸ್ಥೆಯ ಮೂಲಕ ದೇಶದ ಸೇನಾಪಡೆಗಳಿಗೆ ಆನೆಬಲ ತುಂಬಿಸಿದ ಮಹಾನ್ ಪರಾಕ್ರಮಿ ಕಲಾಂ.
ವೇದಿಕೆಗಳಲ್ಲಿ ನಿಂತು ರಾಷ್ಟ್ರಪ್ರೇಮದ ಬೊಗಳೆ ಭಾಷಣ ಮಾಡುವುದಕ್ಕಿಂತ ಕಲಾಂರವರು ಮಾಡಿದ ರಾಷ್ಟ್ರ ಹಿತಾಸಕ್ತಿಯ ಚಟುವಟಿಕೆಗಳು ಊಹಿಸಲು ಅಸಾಧ್ಯವಾದಂತವು ಎಂದು ಅನಂತಕೃಷ್ಣ ಭಟ್ ಹೇಳಿದರು. ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಕಲಾಂ. ಇವರನ್ನು ಕ್ಷಿಪಣಿ ಮಾನವ ಎಂದೇ ಜನರು ಕರೆಯುತ್ತಿದ್ದರು ಎಂದು ಸ್ಮರಿಸಿದರು ಭಟ್.
ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿ ಸಾರ್ಥಕ್ ಪೂಜಾರಿ ತಯಾರಿಸಿದ ಹೊಲದಲ್ಲಿ ಕಳೆಕೀಳುವ, ಉಷ್ಣತೆ ತಿಳಿಸುವ ಜೊತೆಗೆ ಹೊಲದ ತೇವಾಂಶ ಹೀರುವ ಯಂತ್ರದ ಪ್ರಾತ್ಯಕ್ಷಿಕೆ ಮಾಡಲಾಯ್ತು. ಎಡಲ್ವೈಸ್ ಟೋಕಿಯೋ ಲೈಫ್ ಇನ್ಸೂರೆನ್ಸ್ ಕಂಪೆನಿಯ ಮ್ಯಾನೇಜರ್ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಕಲಾಂರವರ ರಾಷ್ಟ್ರಪತಿ ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದ ದೃಷ್ಟಿಮಾಂಧ್ಯ ಮಹಿಳೆ ಶ್ರೀಮತಿ ಸ್ವರ್ಣ ಮುತ್ತುರಾಜ್ ಪೈ ಅನುಭವ ಹಂಚಿಕೊಂಡರು. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೇರೊ ಸ್ವಾಗತಿಸಿದರು. ಶಿಕ್ಷಕಿ ಜೆನ್ನಿಫರ್ ಅರುಣ್ ಬ್ಯಾಪ್ಟಿಸ್ಟ್ ನಿರೂಪಿಸಿದರು.