FILM
ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ ಮಗಳು ಆರಾಧ್ಯ
ನವದೆಹಲಿ ಫೆಬ್ರವರಿ 03: ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ಗಳಲ್ಲಿ ತನ್ನ ಆರೋಗ್ಯದ ಬಗ್ಗೆ ಸುಳ್ಳು ಸದ್ದಿ ಪ್ರಸಾರ ಮಾಡಲಾಗುತ್ತಿದ್ದು, ಅದರ ವಿರುದ್ದ ನಿರ್ಬಂಧ ಹೇರುವಂತೆ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಮಗಳು ಆರಾಧ್ಯ ಬಚ್ಚನ್ ದೆಹಲಿ ಹೈಕೋರ್ಟ್‌ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ.
‘ನನ್ನ ಆರೋಗ್ಯ ಕುರಿತು ಹಲವು ವೆಬ್‌ಸೈಟ್‌ಗಳಲ್ಲಿ ಆಧಾರರಹಿತ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ವದಂತಿಗಳನ್ನು ಹಬ್ಬಿಸಲಾಗಿದೆ. ಇವು ನಕಲಿ ಮತ್ತು ಜನರನ್ನು ತಪ್ಪುದಾರಿಗೆಳೆಯುವಂತಹ ಮಾಹಿತಿಯಾಗಿದೆ. ಈಗಾಗಲೇ ಪ್ರಕಟವಾಗಿರುವ ಸುದ್ದಿಗಳನ್ನು ಕೂಡಲೇ ತೆಗೆದುಹಾಕುವಂತೆ ನಿರ್ದೇಶನ ನೀಡಬೇಕು’ ಎಂದು ಆರಾಧ್ಯ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. 13 ವರ್ಷದ ಆರಾಧ್ಯ ಬಚ್ಚನ್ ಅವರ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಗೂಗಲ್‌ಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ಈ ಹಿಂದೆ ಏಪ್ರಿಲ್ 20, 2023 ರಂದು ನ್ಯಾಯಾಲಯವು ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನು ಆಕೆಯ ಆರೋಗ್ಯದ ಮೇಲೆ ತಪ್ಪುದಾರಿಗೆಳೆಯುವ ವಿಷಯವನ್ನು ಪ್ರಕಟಿಸುವುದನ್ನು ತಡೆಯುವ ಮಧ್ಯಂತರ ಆದೇಶವನ್ನು ನೀಡಿತ್ತು. ಅಲ್ಲದೆ ಆರಾಧ್ಯ ಅವರು “ತೀವ್ರವಾಗಿ ಅಸ್ವಸ್ಥರಾಗಿದ್ದಾರೆ” ಮತ್ತು ” ಸಾವನಪ್ಪಿದ್ದಾರೆ ಎಂದು ಹೇಳುವ ಕೆಲವು ವೀಡಿಯೊಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವಂತೆ ಅದು ಗೂಗಲ್‌ಗೆ ನಿರ್ದೇಶಿಸಿದೆ. ನ್ಯಾಯಾಲಯವು “ಬಾಲಿವುಡ್ ಟೈಮ್”, “ಬೋಲಿ ಪಕೋರಾ”, “ಬೋಲಿ ಸಮೋಸಾ”, “ಬಾಲಿವುಡ್ ಶೈನ್” ಮತ್ತು ಇತರವು ಸೇರಿದಂತೆ ಯುಟ್ಯೂಬ್ ಚಾನೆಲ್‌ಗಳಿಗೆ ಮೊಕದ್ದಮೆಯ ಮೇಲೆ ಸಮನ್ಸ್ ಕೂಡ ನೀಡಿತ್ತು. ಆದರೂ ಇದೀಗ ಮತ್ತೆ ಕೆಲವು ಚಾನೆಲ್ ಗಳು ಸುದ್ದಿ ಮಾಡುತ್ತಿರುವ ಹಿನ್ನಲೆ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.