Connect with us

    KARNATAKA

    ವಿಮಾನ ಹಾರಾಟದಲ್ಲಿರುವಾಗಲೇ ಚಿಕಿತ್ಸೆ ನೀಡಿ ಪುಟ್ಟ ಮಗುವಿಗೆ ವೈದ್ಯರಿಂದ ಜೀವದಾನ..!

    ಬೆಂಗಳೂರು, ಆಗಸ್ಟ್ 30: ವಿಮಾನ ಹಾರಾಟದ ಸಂದರ್ಭದಲ್ಲಿ ಎರಡು ವರ್ಷದ ಮಗುವೊಂದರ ಉಸಿರಾಟದಲ್ಲಿ ದಿಢೀರ್‌ ಏರುಪೇರಾಗಿ ಅಸ್ವಸ್ಥಗೊಂಡಾಗ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಐವರು ವೈದ್ಯರ ತಂಡವೊಂದು ಸಕಾಲಿಕ ಚಿಕಿತ್ಸೆ ನೀಡಿ ಮಗುವಿನ ಪ್ರಾಣ ಉಳಿಸಿದೆ.

    ಸೋಮವಾರ ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರ ವಿಮಾನದಲ್ಲಿ ಈ ಘಟನೆ ನಡೆದಿದೆ.
    ಉಸಿರಾಟ ತೊಂದರೆಯಿಂದ 2 ವರ್ಷದ ಮಗುವಿನ ದೇಹ ನೀಲಿಗಟ್ಟಲು ಆರಂಭಿಸಿತು. ಕೂಡಲೇ ‘ಯುಕೆ 814-ಎ’ ವಿಮಾನ ಸಿಬ್ಬಂದಿ ತುರ್ತು ಕರೆ ಘೋಷಿಸಿದರು.

    ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದೆಹಲಿಯ ಏಮ್ಸ್ ಆಸ್ಪತ್ರೆ ಐವರು ವೈದ್ಯರು ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೈದ್ಯರ ತಂಡ ಬೆಂಗಳೂರಿನ ಸಮ್ಮೇಳನವೊಂದರಲ್ಲಿ ಪಾಲ್ಗೊಂಡು ಮರಳುತ್ತಿತ್ತು. ತಕ್ಷಣವೇ ಏಮ್ಸ್ ಆಸ್ಪತ್ರೆ ಐವರು ವೈದ್ಯರು ಪರೀಕ್ಷೆ ನಡೆಸಿದರು. ಮಗುವಿನ ನಾಡಿಮಿಡಿತದಲ್ಲಿ ವ್ಯತ್ಯಾಸ ಕಂಡುಬಂದಿತ್ತು.

    ವಿಮಾನದಲ್ಲಿ ಲಭ್ಯವಿದ್ದ ವೈದ್ಯಕೀಯ ಉಪಕರಣಗಳನ್ನೇ ಬಳಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ರಕ್ತ ಪರಿಚಲನೆ ಮರಳುವಂತೆ ಮಾಡಿದರು. ಸುಮಾರು 45 ನಿಮಿಷ ವೈದ್ಯರ ಆರೈಕೆ ನಂತರ ಮಗು ಮೊದಲಿನಂತೆ ಉಸಿರಾಡಲು ಆರಂಭಿಸಿತು.
    ಎಇಡಿ ಎಂಬ ವೈದ್ಯಕೀಯ ಸಾಧನ ಬಳಸಿ ಹೃದಯಸ್ತಂಭನವಾಗದಂತೆ ಚಿಕಿತ್ಸೆ ನೀಡಿದ್ದರಿಂದ ಮಗು ಅಪಾಯದಿಂದ ಪಾರಾಗಿದೆ.

    ವೈದ್ಯರು ಹತ್ತಿರದ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಬೇಕು ಎಂದು ಮನವಿ ಮಾಡಿಕೊಂಡಾಗ ನಾಗಪುರ ವಿಮಾನ ನಿಲ್ದಾಣ ಸಮೀಪ ಇದ್ದುದರಿಂದ ಅಲ್ಲಿಗೆ ತೆರಳಿದ್ದಾರೆ. ಅಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು ಎಂದು ಏಮ್ಸ್ ಆಸ್ಪತ್ರೆ ವೈದ್ಯರ ತಂಡ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

    ವೈದ್ಯರ ಈ ಕಾರ್ಯವನ್ನು ಪ್ರಯಾಣಿಕರು ಹಾಗೂ ಮಗುವಿನ ಪೋಷಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಡಾ. ನವ್ ದೀಪ್ ಕೌರ್, ಡಾ. ದಮನ್ ದೀಪ್ ಸಿಂಗ್, ಡಾ.ರಿಷಬ್ ಜೈನ್, ಡಾ. ಓಶಿಕಾ ಮತ್ತು ಡಾ ಅವಿಚಲಾ ತಕ್ಷಕ್. ವೈದ್ಯರ ಈ ಸೇವೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply