KARNATAKA
ಸಾಕಿದ ಬೆಕ್ಕಿನ ಮೇಲೆ ಹಲ್ಲೆ ನಡೆದ ಸ್ನೇಹಿತನ ವಿರುದ್ದ ದೂರು…!
ಬೆಂಗಳೂರು: ತಾನು ಸಾಕಿದ ಬೆಕ್ಕಿನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಆರೋಪದ ಮೇಲೆ ಸ್ನೇಹಿತನ ವಿರುದ್ಧ ಯುವಕನೊಬ್ಬ ಮೈಕೋಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಮೈಕೋ ಲೇಔಟ್‌ನ ಬಿಟಿಎಂ 2ನೇ ಹಂತದ ನಿವಾಸಿ ಮೊಹಮ್ಮದ್ ಅಫ್ತಾಬ್ ನೀಡಿದ ದೂರಿನನ್ವಯ ಮನೀಶ್ ರತ್ನಾಕರ್ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 325 (ಪ್ರಾಣಿಗಳ ಕೊಲ್ಲುವ ಅಥವಾ ಅಂಗವಿಕಲ ಮಾಡುವ ಕೃತ್ಯ) ಅಡಿ ಪ್ರಕರಣ ದಾಖಲಾಗಿದೆ.
ಅಫ್ತಾಬ್ ಹಾಗೂ ಮನೀಶ್ ಒಂದೇ ಮನೆಯಲ್ಲಿದ್ದರು. ನ. 26ರಂದು ಮನೀಶ್ ಮನೆಯಲ್ಲಿದ್ದಾಗ ಬೆಕ್ಕು ಮೂತ್ರ ವಿಸರ್ಜನೆ ಮಾಡಿತೆಂಬ ಕಾರಣಕ್ಕೆ ಕೋಪಗೊಂಡು ಕಾಲಿನಿಂದ ಒದ್ದಿದ್ದನು. ಬಳಿಕ ಅಫ್ತಾಬ್‌ಗ ಕರೆ ಮಾಡಿ, ನಿನ್ನ ಬೆಕ್ಕು ಮನೆಯಲ್ಲಿ ಗಲೀಜು ಮಾಡಿದೆ, ಅದನ್ನು ಹೊರಗೆಸೆದು ಬಾ ಎಂದಿದ್ದ. ಅಫ್ತಾಬ್ ಮನೆಗೆ ಬಂದಾಗ ಬೆಕ್ಕು ಗಾಯಗೊಂಡು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಅವರು ದೂರು ನೀಡಿದ್ದಾರೆ.