DAKSHINA KANNADA
ಮಂಗಳೂರು ; ಕರಾವಳಿಯಲ್ಲಿ ಅಬ್ಬರಿಸಿದ ಫೆಂಗಲ್ ಚಂಡಮಾರುತ, ದಕ್ಷಿಣ ಕನ್ನಡ ಉಡುಪಿಯಲ್ಲಿ ವರುಣನ ಆರ್ಭಟ..!
ಮಂಗಳೂರು : ರಾಜ್ಯ ಕರಾವಳಿಯಲ್ಲಿ ಫೆಂಗಲ್ ಚಂಡಮಾರುತ ಅಬ್ಬರಿಸಿದ್ದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗಾಳಿ, ಸಿಡಿಲು ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ವರ್ಷದ ಕೊನೆಯ ತಿಂಗಳಲ್ಲಿ ಏಕಾಏಕಿ ಮಳೆ ಸುರಿದ ಕಾರಣ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಮುಂಜಾಗೃತಾ ಕ್ರಮವಾಗಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಅನೇಕ ಕಡ ಪ್ರವಾಸಿಗರು ನೀರಿಗಿಳಿಯದಂತೆ ಸೂಚಿಸಲಾಗಿದ್ದು ಮಂಗಳವಾರವೂ ಮಳೆ ಯಬ್ಬರ ಮುಂದುವರೆದಿದೆ. ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ‘ಫೆಂಗಲ್’ ಚಂಡಮಾರುತದಿಂದಾಗಿ ಕರ್ನಾಟಕ-ಕೇರಳ ಗಡಿಯಲ್ಲಿ ಭಾರೀ ಮಳೆಯಾಗುತ್ತಿದೆ. ಕುಂಬ್ಳೆ ಬಳಿ ರಸ್ತೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನಲ್ಲಿ ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ, ಸಮುದ್ರ ತೀರಗಳಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಪ್ರಕೃತಿ ವಿಕೋಪ ಉಂಟಾದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಎಲ್ಲೆಡೆ ಕಾರ್ಮೋಡ ಆವರಿಸಿದ್ದು ಧಾರಾಕಾರ ಮಳೆಯಾಗುತ್ತಿದೆ. ಎಲ್ಲೆಡೆ ಮಳೆಯಿಂದ ಕಲ್ಲಲು ಆವರಿಸಿದ್ದು ವಾಹನ ಸವಾರರು ಲೈಟ್ ಹಾಕಿಕೊಂಡು ವಾಹನ ಚಲಾಯಿಸುತ್ತಿದ್ದಾರೆ. ಸೋಮವಾರ ರಾತ್ತಿ ನಗರದ ಕೊಡಿಯಾಲ್ ಗುತ್ತು, ಕೊಟ್ಟಾರ ಚೌಕಿ ಮತ್ತಿತರ ಭಾಗಗಳಲ್ಲಿ ರಸ್ತೆಯೇ ಹೊಳೆಯಂತಾಗಿದ್ದು ರಸ್ತೆಯ ಮೇಲೆ ನಿಲ್ಲಿಸಿರುವ ವಾಹನಗಳು ನೀರಿನಲ್ಲಿ ಮುಳುಗಿವೆ. ಕೊಡಿಯಾಲ್ ಗುತ್ತು ಅಪಾರ್ಟ್ಮೆಂಟ್ ನ ಮೇಲ್ಭಾಗದ ತಡೆಗೋಡೆ ಕುಸಿದ ಪರಿಣಾಮ ಮಳೆ ನೀರು ಅಪಾರ್ಟ್ ಮೆಂಟ್ ನೆಲಮಹಡಿಗೆ ನೀರು ನುಗ್ಗಿದ್ದು ಪರಿಹಾರ ಕಾರ್ಯ ಆರಂಭಿಸಲಾಗಿದೆ. ಮಂಗಳೂರು ಜೆಪ್ಪು ವಾರ್ಡ್ ನ ಎಂ.ಆರ್. ಭಟ್ ಲೇನ್ ನ ಸುರಕ್ಷಾ ಹಾಸ್ಟೆಲ್ ಬಳಿ ಇರುವ ಅಬ್ದುಲ್ ರಹ್ಮಾನ್ ಎಂಬವರ ಮನೆಯ ಆವರಣ ಗೋಡೆ ಕುಸಿದಿದೆ. ಇದರಿಂದ ಮನೆಗೂ ಹಾನಿಯಾಗುವ ಭೀತಿ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಾಳದಲ್ಲಿ 22 ಸೆಂ.ಮೀ, ಮೂಲ್ಕಿ ಐಕಳದಲ್ಲಿ 21 ಸೆಂ.ಮೀ, ಕಿಲ್ಪಾಡಿ ಮತ್ತು ಕಿನ್ನಿಗೋಳಿಯಲ್ಲಿ 19 ಸೆಂ.ಮೀ, ಸುರತ್ಕಲ್ 18 ಸೆಂ.ಮೀ ಮಳೆ ದಾಖಲಾಗಿದೆ.
ಉಡುಪಿ ಜಿಲ್ಲೆಯಲ್ಲೂ ಮಳೆಯಬ್ಬರ ಮುಂದುವರೆದಿದ್ದು ಇಂದು ಮಂಗಳವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದು ರಾತ್ರಿ ಉಡುಪಿಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ನದಿ, ಸಮುದ್ರ ಪಾತ್ರದ ಜನ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅರಬ್ಬೀ ಸಮುದ್ರದಲ್ಲಿ ಮೀನುಗಾರರು ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಹೆಮಾಡಿಯಲ್ಲಿ 23.4 ಸೆಂ.ಮೀ, ಕಾಪು ತೆಂಕದಲ್ಲಿ 22 ಸೆಂ.ಮೀ ಮಳೆಯಾಗಿದೆ. ಕಾರ್ಕಳದ ನೀರೆಯಲ್ಲಿ 26.1 ಸೆಂಟಿ ಮೀಟರ್ ಮಳೆಯಾಗಿ ದಾಖಲೆ ನಿರ್ಮಿಸಿದೆ.