LATEST NEWS
‘ಪ್ರಾಜೆಕ್ಟ್ ಚೀತಾ ’ಗೆ ಹೊಡೆತ: ಕುನೋ ಪಾರ್ಕ್ ನಲ್ಲಿಯ ಇನ್ನೊಂದು ಚೀತಾ ಸಾವು!
ಭೋಪಾಲ, ಜುಲೈ 12: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನ (KNP)ದಲ್ಲಿ ಇನ್ನೊಂದು ವಯಸ್ಕ ಆಫ್ರಿಕನ್ ಚೀತಾ ಸಾವನ್ನಪ್ಪಿದ್ದು,ಇದು ಮಹತ್ವಾಕಾಂಕ್ಷೆಯ ‘ಪ್ರಾಜೆಕ್ಟ್ ಚೀತಾ ’ಕ್ಕೆ ಇನ್ನೊಂದು ಹೊಡೆತವಾಗಿದೆ.
ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ‘ತೇಜಸ್’ಹೆಸರಿನ ಚೀತಾ ಮಂಗಳವಾರ ಅಪರಾಹ್ನ ಮೂರು ಗಂಟೆಯ ಸುಮಾರಿಗೆ ಉದ್ಯಾನವನದಲ್ಲಿಯ ಆವರಣದಲ್ಲಿ ಮೃತಪಟ್ಟಿದೆ. ಮಿಲನಕ್ಕಾಗಿ ಅದನ್ನು ನಮೀಬಿಯಾದ ಹೆಣ್ಣು ಚೀತಾದೊಂದಿಗೆ ಈ ಆವರಣದಲ್ಲಿ ಇರಿಸಲಾಗಿತ್ತು.
ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಸಿಬ್ಬಂದಿಗಳು ‘ತೇಜಸ್ ’ಕುತ್ತಿಗೆಯಲ್ಲಿ ಗಾಯವನ್ನು ಕಂಡು ಪಶು ಉದ್ಯಾನವನದ ಪಶು ವೈದ್ಯಕೀಯ ತಜ್ಞರಿಗೆ ಮಾಹಿತಿ ನೀಡಿದ್ದರು. ಅವರು ಬಂದು ಪರಿಶೀಲಿಸಿದಾಗ ಗಾಯವು ಗಂಭೀರ ಸ್ವರೂಪದ್ದಾಗಿದೆ ಎನ್ನುವುದು ಬೆಳಕಿಗೆ ಬಂದಿತ್ತು. ಚಿಕಿತ್ಸೆ ಆರಂಭಿಸಲು ಅಪರಾಹ್ನ ವೈದ್ಯಕೀಯ ತಂಡವು ಸ್ಥಳಕ್ಕೆ ಮರಳಿದಾಗ ಚೀತಾ ಮೃತಪಟ್ಟಿತ್ತು ಎಂದು ಹಿರಿಯ ಅರಣ್ಯ ಇಲಾಖೆ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ. ಹೆಣ್ಣು ಚೀತಾದೊಂದಿಗೆ ದೈಹಿಕ ಹೋರಾಟವು ಮಾರಣಾಂತಿಕ ಗಾಯಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಮಾರ್ಚ್ ಕೊನೆಯ ವಾರದಿಂದೀಚಿಗೆ ಇದು ಕೆಎನ್ಪಿಯಲ್ಲಿ ನಾಲ್ಕನೇ ವಯಸ್ಕ ಚೀತಾದ ಸಾವಾಗಿದೆ. ಮಾರ್ಚ್ ನಲ್ಲಿ ನಮೀಬಿಯಾದ ಹೆಣ್ಣುಚೀತಾಕ್ಕೆ ಜನಿಸಿದ್ದ ನಾಲ್ಕು ಮರಿಗಳಲ್ಲಿ ಮೂರು ಸಹ ಸಾವನ್ನಪ್ಪಿವೆ.
ನಮೀಬಿಯಾದಿಂದ ಎಂಟು ಮತ್ತು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಕೆಎನ್ಪಿಗೆ ತರಲಾಗಿದ್ದು,ಪ್ರಸ್ತುತ 16 ವಯಸ್ಕ ಚೀತಾಗಳು ಮತ್ತು ಒಂದು ಮರಿ ಮಾತ್ರ ಉಳಿದುಕೊಂಡಿವೆ.