Connect with us

    LATEST NEWS

    ರೈಲು ನಿಲ್ದಾಣದಲ್ಲಿ ಕಳುವಾದ 7 ತಿಂಗಳ ಮಗು ಬಿಜೆಪಿ ಕಾರ್ಪೋರೇಟರ್ ಮನೆಯಲ್ಲಿ ಪತ್ತೆ!

    ಖನೌ, ಆಗಸ್ಟ್ 30: ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ಪಾಲಕರ ಜೊತೆ ಮಲಗಿದ್ದಾಗ ಕಳುವಾದ 7 ತಿಂಗಳ ಮಗು ಒಂದು ವಾರದ ಬಳಿಕ 100 ಕೀ.ಮೀ ದೂರದಲ್ಲಿರುವ ಫಿರೋಜಾಬಾದ್​ನ ಬಿಜೆಪಿ ಕಾರ್ಪೋರೇಟರ್​ ಒಬ್ಬರ ಮನೆಯಲ್ಲಿ ಪತ್ತೆಯಾಗಿದೆ.

    ಮಕ್ಕಳನ್ನು ಕದ್ದು, ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿದಾಗ ಮಗು ಪತ್ತೆಯಾಗಿದೆ. ಬಿಜೆಪಿಯ ವನಿತಾ ಅಗರ್ವಾಲ್​ ಮತ್ತು ಆಕೆಯ ಪತಿ, ಇಬ್ಬರು ವೈದ್ಯರಿಂದ 1.8 ಲಕ್ಷಕ್ಕೆ ಮಗುವನ್ನು ಕೊಂಡುಕೊಂಡಿದ್ದರು ಎಂದು ತಿಳಿದುಬಂದಿದೆ. ಇಬ್ಬರು ವೈದ್ಯರು ಮಕ್ಕಳ ಮಾರಾಟದ ಜಾಲದ ಭಾಗವಾಗಿದ್ದಾರೆ. ಬಿಜೆಪಿ ನಾಯಕಿಗೆ ಈಗಾಗಲೇ ಹೆಣ್ಣು ಮಗಳಿದ್ದು, ಗಂಡು ಬೇಕಾಗಿದ್ದರಿಂದ ವೈದ್ಯರಿಂದ ಖರೀದಿಸಿದ್ದರು ಎಂದು ತಿಳಿದುಬಂದಿದೆ.

    ರೈಲು ನಿಲ್ದಾಣದ ಪ್ಲಾಟ್​ಫಾರ್ಮ್​ನಲ್ಲಿ ಮಗು ಮಲಗಿದ್ದಾಗ ಕಳ್ಳತನ ಮಾಡಿದ ಖದೀಮ ಸೇರಿದಂತೆ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವನ್ನು ಮತ್ತೆ ತಾಯಿಯ ಮಡಿಲು ಸೇರಿಸಿದ್ದಾರೆ. ಪ್ರಕರಣ ಸಂಬಂಧ ಮಥುರಾದಲ್ಲಿ ರೈಲ್ವೇ ಪೊಲೀಸರು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಪೊಲೀಸರು ಮಗುವನ್ನು ತಾಯಿಗೆ ಹಸ್ತಾಂತರಿಸುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.

    ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಮುಷ್ತಾಕ್ ಅವರು ಮಾಹಿತಿ ನೀಡಿದ್ದು, ಹಣಕ್ಕಾಗಿ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್ ಅಪಹರಣವನ್ನು ನಡೆಸಿದೆ ಎಂದು ಹೇಳಿದರು. ಖದೀಮ್ ದೀಪ್ ಕುಮಾರ್ ಎಂಬ ವ್ಯಕ್ತಿ ಮಗುವನ್ನು ಕದ್ದೊಯ್ದಿದ್ದಾನೆ ಎಂದು ನಾವು ಮೊದಲಿಗೆ ಕಂಡುಕೊಂಡೆವು. ಖದೀಮ ನೆರೆಯ ಹತ್ರಾಸ್ ಜಿಲ್ಲೆಯಲ್ಲಿ ಆಸ್ಪತ್ರೆಯನ್ನು ನಡೆಸುತ್ತಿರುವ ಇಬ್ಬರು ವೈದ್ಯರನ್ನು ಒಳಗೊಂಡಿರುವ ಗ್ಯಾಂಗ್‌ನ ಭಾಗವಾಗಿದ್ದಾನೆ.

    ಇತರ ಕೆಲವು ಆರೋಗ್ಯ ಕಾರ್ಯಕರ್ತರು ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಮಗು ಯಾರ ಮನೆಯಲ್ಲಿದೆ ಎಂದು ನಾವು ವಿಚಾರಣೆ ನಡೆಸಿದೆವು. ಕೊನೆಗೂ ಮಗು ಬಿಜೆಪಿಯ ವನಿತಾ ಅಗರ್ವಾಲ್​ ಮನೆಯಲ್ಲಿ ಪತ್ತೆಯಾಗಿಯಿತು. ದಂಪತಿಗೆ ಈಗಾಗಲೇ ಒಬ್ಬಳೇ ಮಗಳಿದ್ದು, ಗಂಡು ಮಗುವನ್ನು ಬಯಸಿದ್ದರು. ಅದಕ್ಕಾಗಿಯೇ ಅವರು ವೈದ್ಯರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಮುಷ್ತಾಕ್​ ತಿಳಿಸಿದರು.

    ಬಿಜೆಪಿ ನಾಯಕಿ ಮತ್ತು ಆಕೆಯ ಪತಿಯನ್ನು ಬಂಧಿಸಲಾಗಿದ್ದು, ಕಾರ್ಪೊರೇಟರ್ ಕಡೆಯಿಂದಾಗಿ ಅಥವಾ ಬಿಜೆಪಿಯಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ಪ್ರಕರಣ ದಾಖಲಾಗಿದ್ದು, ಬಂಧಿತರ ವಿಚಾರಣೆ ನಡೆಯುತ್ತಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *