KARNATAKA
ಚಾರಣಕ್ಕೆ ಹೋಗಿ ದಟ್ಟ ಕಾಡಲ್ಲಿ ಸಿಲುಕಿದ್ದ 9 ವಿದ್ಯಾರ್ಥಿಗಳ ರಕ್ಷಣೆ, FIR ದಾಖಲು..!
ಬೆಳಗಾವಿ : ಬೆಳಗಾವಿಯ ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ಹಾದಿ ತಪ್ಪಿಸಿಕೊಂಡಿದ್ದ ಒಂಬತ್ತು ವಿದ್ಯಾರ್ಥಿಗಳನ್ನು ಕರ್ನಾಟಕ ಮತ್ತು ಗೋವಾ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಸತತ 8 ತಾಸುಗಳ ಬಳಿಕ ರಕ್ಷಿಸಿದ್ದಾರೆ.
ಬೆಳಗಾವಿಯ ಜಿ.ಎಸ್.ಎಸ್. ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ 9 ವಿದ್ಯಾರ್ಥಿಗಳು ಶುಕ್ರವಾರ ಮಧ್ಯಾಹ್ನ ನಾಲ್ಕು ಬೈಕ್‌ಗಳಲ್ಲಿ ಗೋವಾ-ಕರ್ನಾಟಕ ಗಡಿಯ ಪಾರವಾಡ ಗ್ರಾಮದ ಹೊರವಲಯದ ದಟ್ಟ ಅರಣ್ಯದಲ್ಲಿರುವ ಜಾವಾಣಿ ಜಲಪಾತ ವೀಕ್ಷಿಸಲು ತೆರಳಿದ್ದರು. ಆದರೆ ಶುಕ್ರವಾರ ಸಂಜೆ ಕತ್ತಲಾವರಿಸಿದ್ದರಿಂದ ಮರಳಿ ಬರುವಾಗ ದಾರಿ ಗೊತ್ತಾಗದೇ ಯುವಕರು ದಟ್ಟ ಕಾಡಿನಲ್ಲಿ ಕಣ್ಮರೆಯಾಗಿದ್ದರು.
ಕಾಡಿನಲ್ಲಿ ದಾರಿ ತಪ್ಪಿರುವುದು ಗೊತ್ತಾಗುತ್ತಿದ್ದಂತೆ ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೆ ಮೊಬೈಲ್ ಮೂಲಕ ಸಂದೇಶ ಕಳಿಸಿದ್ದಾರೆ. ವಿದ್ಯಾರ್ಥಿಗಳು ಕುಟುಂಬಸ್ಥರು ಅರಣ್ಯಾಧಿಕಾರಿಗಳ ಗಮನಕ್ಕೆ ಈ ವಿಷಯ ತಂದಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆಯ 30 ಸಿಬ್ಬಂದಿ 8 ಗಂಟೆಗಳ ಕಾಲ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಶೋಧಕಾರ್ಯ ನಡೆಸಿ ಕೊನೆಗೂ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಇದೀಗ ಅಕ್ರಮ ಅರಣ್ಯ ಪ್ರದೇಶ ಪ್ರವೇಶ ಆರೋಪದಡಿ ಗೋವಾ ಅರಣ್ಯ ಇಲಾಖೆ ವಿದ್ಯಾರ್ಥಿಗಳ ವಿರುದ್ಧ FIR ದಾಖಲು ಮಾಡಿದೆ.