Connect with us

    UDUPI

    ವಲಸೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ಕ್ಯಾಂಪ್ ಮಾಡಿ- ಪ್ರಮೋದ್ ಸೂಚನೆ

     ವಲಸೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ಕ್ಯಾಂಪ್ ಮಾಡಿ-  ಪ್ರಮೋದ್ ಸೂಚನೆ

    ಉಡುಪಿ, ಡಿಸೆಂಬರ್ 30: ವಲಸೆ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ತಹಸೀಲ್ದಾರ್, ಆಹಾರ ಇಲಾಖೆ ಅಧಿಕಾರಿಗಳು, ಪ್ರಗತಿ ನಗರ, ಬೀಡಿನಗುಡ್ಡೆ, ಹಾರಾಡಿ ಮುಂತಾದೆಡೆ ಕ್ಯಾಂಪ್ ಹಾಕಿ ಕ್ರಮ ವಹಿಸಿ ಎಂದು ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸೂಚನೆ ನೀಡಿದರು.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಲಸೆ ಕಾರ್ಮಿಕರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಸಭೆಯಲ್ಲಿ ಪಾಲ್ಗೊಂಡಿದ್ದ ವಲಸೆ ಕಾರ್ಮಿಕರ ಅಹವಾಲುಗಳನ್ನು ಆಲಿಸಿದರಲ್ಲದೆ, ವಲಸೆ ಕಾರ್ಮಿಕರಿಗೋಸ್ಕರ ಪ್ರತ್ಯೇಕ ಆಹಾರ ನೀತಿಯನ್ನು ರೂಪಿಸುವ ಪ್ರಸ್ತಾವನೆಯನ್ನು ಮಂಡಿಸಲು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಅನ್ನಭಾಗ್ಯದಂತಹ ಯೋಜನೆ ವಲಸಿಗರಿಗೆ ನೆರವಾಗಬೇಕು; ಇವರಿಗೆ ಪಡಿತರ ಪೂರೈಕೆ ಸರಳವಾಗಬೇಕೆಂಬ ಉದ್ದೇಶದಿಂದ ಪ್ರಾಯೋಗಿಕವಾಗಿ ಒಂದು ಪಡಿತರ ಅಂಗಡಿಯಲ್ಲಿ ಬಯೋಮೆಟ್ರಿಕ್ ಮುಖಾಂತರ ಆಧಾರ ಕಾರ್ಡ್ ನಂಬರ್ ನ್ನು ಆಧಾರವಾಗಿರಿಸಿ ಪಡಿತರ ಪಡೆಯಲು ಸಾಧ್ಯವೇ ಎಂದು ಪರಿಶೀಲಿಸಲು ಆಹಾರ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ನಿವೇಶನಕ್ಕೆ ಜಾಗದ ಕೊರತೆ ಇರುವುದರಿಂದ ವಲಸಿಗರಿಗೆ ಮೂಲಸೌಕರ್ಯ ಒದಗಿಸುವುದು ಸವಾಲಾಗಿದ್ದು, ಸಿಎಂಸಿ ವ್ಯಾಪ್ತಿಯಲ್ಲಿ ನೈಟ್ ಶಲ್ಟರ್‍ನ್ನು ತಾತ್ಕಾಲಿಕ ವಾಸಯೋಗ್ಯವಾಗಿಸಲು, ನಮ್ಮ ಭೂಮಿ ಸರ್ಕಾರೇತರ ಸಂಸ್ಥೆಗೆ ನೀಡಿ ನಡೆಸುವ ಬಗ್ಗೆ ಅವಕಾಶವಿದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳಿ ಎಂದು ಸಿಎಂಸಿ ಇಂಜಿನಿಯರ್‍ಗೆ ಆದೇಶ ನೀಡಿದರು.

    ಹಾರಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಒದಗಿಸಲು ಶೀಘ್ರವೇ ಬೋರ್‍ವೆಲ್ ಕೊರೆಯಲು ಹಾಗೂ ಶೌಚಾಲಯ ನಿರ್ಮಿಸಲು ಕ್ರಮಕೈಗೊಳ್ಳಿ ಎಂದ ಅವರು, ಬೀದಿ ದೀಪಕ್ಕೆ ತಕ್ಷಣ ವ್ಯವಸ್ಥೆ ಮಾಡಿ ಎಂದು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

    ಪ್ರಗತಿ ನಗರದಲ್ಲಿನ ಶಾಲೆಗೆ ಮಕ್ಕಳು ತೆರಳಲು ಅನುಕೂಲವಾಗುವಂತೆ ನರ್ಮ್ ಬಸ್ ರೂಟ್ ನ್ನು ಪ್ರಗತಿ ನಗರದವರೆಗೆ ವಿಸ್ತರಿಸಲು ಸೂಚಿಸಿದ ಸಚಿವರು, ಮುಖ್ಯಮಂತ್ರಿಗಳ ಸಾಧನ ಸಂಭ್ರಮದ ದಿನ 94 ಸಿ ಮತ್ತು ಸಿಸಿಯಡಿ ಹಕ್ಕುಪತ್ರ ನೀಡಲು ತಹಸೀಲ್ದಾರರಿಗೆ ಹೇಳಿದರು.

    ರೇಷನ್ ಕಾರ್ಡ್, ಮತದಾರರ ಚೀಟಿ, ಹಕ್ಕುಪತ್ರ, ಕುಡಿಯುವ ನೀರು, ಸಮುದಾಯ ಶೌಚಾಲಯ ಒದಗಿಸುವ ಬಗ್ಗೆ, ಇಲಾಖೆಯಲ್ಲಿರುವ ಕಲ್ಯಾಣ ನಿಧಿಯ ಸದ್ಬಳಕೆಯ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಸೂಕ್ತ ನಿರ್ದೇಶನಗಳನ್ನು ನೀಡಿದರು.

    ಜಾಗದ ಕೊರತೆಗೆ ಪರಿಹಾರವಾಗಿ ಜಿ+ ಯೋಜನೆಯನ್ನು ಸಿದ್ದಪಡಿಸಿ ಸಿಎಂಸಿಯಲ್ಲಿ ಅನುದಾನಕ್ಕೆ ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದರು.

    ವಲಸೆ ಕಾರ್ಮಿಕರು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ, ಬಾಲ್ಯವಿವಾಹ ಮಾಡದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದ ಜಿಲ್ಲಾಧಿಕಾರಿಗಳು, ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

    ವಲಸೆ ಬಂದಿರುವ ಕಾರ್ಮಿಕರಿಗೆ ಕೌಶಲ್ಯ ಹೆಚ್ಚಿಸಿ ಸ್ವಾವಲಂಬಿಗಳಾಗಿ ಬದುಕಲು ಅಗತ್ಯ ತರಬೇತಿಗಳನ್ನು ನೀಡಲು ಜಿಲ್ಲಾಡಳಿತ ಬದ್ದವಾಗಿದೆ ಎಂದರು. ಮಕ್ಕಳಿಗೆ ಉಚಿತ ಶಿಕ್ಷಣ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು .

    ಶಿಕ್ಷಣ ಮಕ್ಕಳ ಹಕ್ಕು ಎಂಬುದನ್ನು ಕಾರ್ಮಿಕರಿಗೆ ಜಿಲ್ಲಾಧಿಕಾರಿಗಳು ವಿವರಿಸಿದರು.

    ವಲಸೆ ಕಾರ್ಮಿಕರು ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರು ವಲಸೆ ಕಾರ್ಮಿಕರಿಗೆ ಮನದಟ್ಟು ಮಾಡಿದರು.

    ಕಾಪುವಿನಲ್ಲಿ ವಲಸೆ ಕಾರ್ಮಿಕರು ಸ್ವಚ್ಛತೆ ಪಾಲಿಸಬೇಕಾದ ಅಗತ್ಯ ಹಾಗೂ ಪಾಲಿಸದಿರುವ ಬಗ್ಗೆ ಮುಖ್ಯಾಧಿಕಾರಿ ರಾಯಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
    ಸಭೆಯಲ್ಲಿ ಸಹಾಯಕ ಆಯುಕ್ತರಾದ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಅನುರಾಧ, ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply