KARNATAKA
ಉತ್ತರ ಕನ್ನಡ – ಟಾಯ್ಲೆಟ್ ಗೆ ತೆರಳಿದ್ದ ವೇಳೆ ತುಂಡಾದ ಕರೆಂಟ್ ವಯರ್ ಸ್ಪರ್ಶಿಸಿ ವಿಧ್ಯಾರ್ಥಿನಿ ಸಾವು
ಉತ್ತರಕನ್ನಡ ನವೆಂಬರ್ 29: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯಾರ್ಥಿನಿಗೆ ತುಂಡಾದ ವಿದ್ಯುತ್ ಸರ್ವಿಸ್ ವೈರ್ ತಗುಲಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮೃತ ವಿಧ್ಯಾರ್ಥಿನಿಯನ್ನು 2ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಬಸವರಾಜ ಗೌಳಿ(8) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸಾನ್ವಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾಳೆ. ಹೊಸದಾಗಿ ತೋಡಿದ ಬೋರ್‌ವೆಲ್ ಮೂಲಕ ನೀರನ್ನು ಪಂಪ್ ಮಾಡಲು ತಂತಿಯನ್ನು ಬೋರ್‌ವೆಲ್‌ಗೆ ಜೋಡಿಸಲಾಗಿತ್ತು. ಪ್ರತ್ಯೇಕವಾಗಿ ಹೆಸ್ಕಾಂನ ವಿತರಣಾ ಮಾರ್ಗದ ಸೇವಾ ಲೈನ್‌ಗೆ ಸಂಪರ್ಕ ಕಲ್ಪಿಸಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಮಕ್ಕಳು ಬಳಸುತ್ತಿದ್ದ ಶೌಚಾಲಯದೊಳಗೆ ತಂತಿ ತುಂಡಾಗಿ ಬಿದ್ದಿತ್ತು. ‘ಶೌಚಾಲಯಕ್ಕೆ ಬಂದಿದ್ದ ಸಾನ್ವಿ ವಿದ್ಯುತ್ ತಂತಿ ಸ್ಪರ್ಶಿಸಿ ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾಳೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
1 Comment