UDUPI
50 ಕೋಟಿ ರೂಪಾಯಿ ವೆಚ್ಚದಲ್ಲಿ 5 ಬಸ್ ನಿಲ್ದಾಣ – ಪ್ರಮೋದ್ ಮಧ್ವರಾಜ್
ಉಡುಪಿ, ಸೆಪ್ಟಂಬರ್ 10 : ಉಡುಪಿಯಲ್ಲಿ ಒಂದು ವರ್ಷದ ಅವಧಿಯಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ 5 ಸುಸುಜ್ಜಿತ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಉಡುಪಿಯಲ್ಲಿ 4 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಉಡುಪಿ ಯ ಬನ್ನಂಜೆಯಲ್ಲಿ 3 ಎಕರೆ ಪ್ರದೇಶದಲ್ಲಿ 35 ಕೋಟಿ ವೆಚ್ಚದಲ್ಲಿ ಸುಸುಜ್ಜಿತ ಸಾರಿಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ನೀಡಲಾಗಿದೆ ಹಾಗೂ 10 ಕೋಟಿ ವೆಚ್ಚದಲ್ಲಿ ಮಣಿಪಾಲ, ಉಡುಪಿ ಹಾಗೂ ಮಲ್ಪೆಯಲ್ಲಿ ಸಿಟಿ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ನರ್ಮ್ ಬಸ್ ಗಳಿಗೆ ಮಂಜೂರಾತಿ ನೀಡುವುದನ್ನು ತಡೆಯಲು ಖಾಸಗಿಯವರಿಂದ ಎಷ್ಟೇ ಒತ್ತಡ ಬಂದರೂ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಯಾವುದೇ ಒತ್ತಡಗಳಿಗೆ ಮಣಿಯದೇ ಇದ್ದುದರಿಂದ ಇಂದು ಗ್ರಾಮೀಣ ಭಾಗದ ಜನತೆಗೆ, ಹಿರಿಯ ನಾಗರೀಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ದೊರೆಯುತ್ತಿದೆ , ಪ್ರಸ್ತುತ 4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 3 ಅಂತಸ್ತಿನ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ 10 ಬಸ್ ಗಳು ಏಕಕಾಲದಲ್ಲಿ ನಿಲ್ಲುವ ವ್ಯವಸ್ಥೆಯಿದ್ದು, 20 ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಹಾಗೂ 9 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿದ್ದು, 10 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.
ಉಡುಪಿಗೆ ಪ್ರತ್ಯೇಕ ಡಿವಿಜನ್ ಪ್ರಾರಂಭಿಸಲಾಗುವುದು – ಗೋಪಾಲ ಪೂಜಾರಿ
ಮುಖ್ಯ ಅತಿಥಿಯಾಗಿದ್ದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಬೈಂದೂರು ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಉಡುಪಿ ಬಸ್ ನಿಲ್ದಾಣ ನಿರ್ಮಾಣ ಕುರಿತಂತೆ 3 ದಿನದಲ್ಲಿ ಟೆಂಡರ್ ಕರೆಯಲಾಗುವುದು. ಜಿಲ್ಲೆಯಲ್ಲಿ 87 ಪರ್ಮಿಟ್ ಗಳಿಗೆ ಸಮಯ ನೀಡಲು ಹಾಗೂ 63 ಪರ್ಮಿಟ್ ನೀಡಲು ಬಾಕಿ ಇದ್ದು, 44 ಬಸ್ ಗಳು ಸಂಚರಿಸುತ್ತಿವೆ. ನಿಗಮಕ್ಕೆ 1800 ಹೊಸ ಬಸ್ ಗಳನ್ನು ಖರೀದಿಸುತ್ತಿದ್ದು, 1000 ಹಳೆಯ ಬಸ್ ಗಳನ್ನು ಬದಲಾಯಿಸಲಾಗುತ್ತಿದೆ. ಉಡುಪಿ ಮಂಗಳೂರು ವಿಭಾಗಕ್ಕೆ ಹೊಸದಾಗಿ 11 ವೋಲ್ವೋ ಬಸ್ ಗಳನ್ನು ನೀಡಲಾಗುತ್ತಿದೆ. ಕಾರ್ಕಳದಲ್ಲಿ ಸೂಕ್ತ ಸ್ಥಳ ನೀಡಿದರೆ ಬಸ್ ಡಿಪೋ ಮಾಡಲಾಗುವುದು. ಬೈಂದೂರಿನಲ್ಲಿ ಬಸ್ ಡಿಪೂ ನಿರ್ಮಾಣಕ್ಕೆ ಈಗಾಗಲೇ 10 ಕೋಟಿ ರೂಪಾಯಿ ಕಾಯ್ದಿರಿಸಿದೆ. ಕಾರ್ಕಳ ಮತ್ತು ಬೈಂದೂರು ನಲ್ಲಿ ಹೊಸ ಡಿಪೋ ನಿರ್ಮಾಣವಾದರೆ, ಉಡುಪಿಗೆ ಪ್ರತ್ಯೇಕ ಡಿವಿಜನ್ ಪ್ರಾರಂಭಿಸಲಾಗುವುದು ಎಂದರು. ಜಿಲ್ಲೆಯ ಪ್ರತಿ ಗ್ರಾಮಕ್ಕೂ ಸರ್ಕಾರಿ ಬಸ್ ಸೌಲಭ್ಯ ಒದಗಿಸಲು ಬದ್ದರಾಗಿದ್ದು, ಕುಂದಾಪುರ-ಹೊಸಂಗಡಿ-ಶಿವಮೊಗ್ಗ ಹಾಗೂ ಕುಂದಾಪುರ- ಹೊಸನಗರ-ಶಿವಮೊಗ್ಗ ಮಾರ್ಗದಲ್ಲಿ ಬಸ್ ವ್ಯವಸ್ಥೆ ಒದಗಿಸಲಾಗುವುದು ಎಂದು ಹೇಳಿದರು.