KARNATAKA
25 ವರ್ಷದ ಪ್ರೀತಿಗೆ ಈಗ ಮದುವೆಯ ಬೆಸುಗೆ, ಇದೊಂದು ವಿರಳ ಪ್ರೇಮ ಕಥೆ!
ತುಮಕೂರು: ಪವಿತ್ರ ಪ್ರೀತಿ ಎಲ್ಲವನ್ನು ಮೀರಿದ್ದು ಎನ್ನುವುದಕ್ಕೆ ಈ ತುಮಕೂರಿನ ಒಂದು ಲವ್ಸ್ಟೋರಿ ಉತ್ತಮ ಉದಾಹರಣೆ ಆಗಿದೆ. ಆತನಿಗೆ 52 ವರ್ಷ ಮತ್ತು ಆಕೆಗೆ 54 ವರ್ಷ. ಇಬ್ಬರ 25 ವರ್ಷಗಳ ಪ್ರೀತಿಗೆ ಇದೀಗ ಮದುವೆ ಎಂಬ ಬೆಸುಗೆ ಬಿದ್ದಿದೆ.
ಮಂತ್ರ ಮಾಂಗಲ್ಯದ ಮೂಲಕ 50ರ ದಶಕದ ಜೋಡಿ ವೈವಾಹಿಕ ಸಂಬಂಧಕ್ಕೆ ಕಾಲಿಟ್ಟಿದೆ. ಇಂಥದ್ದೊಂದು ಅಪರೂಪದ ಕ್ಷಣಕ್ಕೆ ತುಮಕೂರಿನ ಗುಬ್ಬಿ ಸಾಕ್ಷಿಯಾಗಿದೆ. ಈ ಜೋಡಿಯು ಶುದ್ಧ ಪ್ರೀತಿಯ ಉದಾಹರಣೆಯಾಗಿದೆ. ಈ ಜೋಡಿಯದ್ದು ಅದ್ಧೂರಿ ಪ್ರೇಮವಿವಾಹ ಎಂದು ಜನ ಕೊಂಡಾಡುತ್ತಿದ್ದಾರೆ. ಹಾಗಾದ್ರೆ ಆ ಪ್ರೇಮ ಜೋಡಿ ಯಾರು? ಇಷ್ಟು ತಡವಾಗಿ ಯಾಕೆ ಮದುವೆಯಾದರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಅಂದಹಾಗೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಪ್ರೀತಿಯ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ತರೀಕೆರೆ ಸಮೀಪದ ಅಮೃತಪುರದ ಅಮೃತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸುಧಾ (54) ಮತ್ತು ಮೋಹನ್ ಕುಮಾರ್ (52) ಪ್ರೇಮ ವಿವಾಹವಾಗಿದ್ದಾರೆ. ಇಬ್ಬರೂ ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆಯ ನೌಕರರು. ಜನಪ್ರತಿನಿಧಿಗಳಿಗೆ ತರಬೇತಿ ಸಂಪನ್ಮೂಲ ಮಾಸ್ಟರ್ ಟ್ರೇನರ್ಸ್ ಆಗಿ ತರಬೇತಿ ನೀಡುವವರಾಗಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೋಹನ್ ಕುಮಾರ್ ಬ್ರಾಹ್ಮಣರಾದರೆ, ಸುಧಾ ಮರಾಠಿ ಮಹಿಳೆ.
ಗ್ರಾಮಪಂಚಾಯಿತಿ ನೌಕರರಿಗೆ ಮತ್ತು ಪಂಚಾಯಿತಿ ಸದಸ್ಯರುಗಳಿಗೆ ತರಬೇತಿ ನೀಡುವ ತರಬೇತಿದಾರರಾಗಿ ಇಡೀ ರಾಜ್ಯವನ್ನು ಸುತ್ತಿದ ಇವರು, ಚಿಕ್ಕ ವಯಸ್ಸಿನಲ್ಲೇ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಆಕರ್ಷಿತರಾಗಿ ಸಿಪಿಎಂ ಸೇರಿದರು. ಹಲವು ಚಳವಳಿ, ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಇಬ್ಬರೂ ಪ್ರಜ್ಞಾವಂತರು, ಪ್ರಗತಿಪರ ಚಿಂತನೆಗಳನ್ನು ರೂಢಿಸಿಕೊಂಡವರು, ಇವರಂತೆ ಹಲವರನ್ನು ಚಳುವಳಿಗಳ ಮೂಲಕ ಪ್ರಗತಿಪರರನ್ನಾಗಿ ಮಾಡಿದರು, ರೈತ ಸಂಘದಲ್ಲಿ ಹೋರಾಟ ಮತ್ತು ಚಳುವಳಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾಗವಹಿಸಿದವರು. ಇಬ್ಬರೂ 90ರ ದಶಕದಲ್ಲಿ ಬಿ.ಕೆ.ಸುಂದರೇಶ್ ಅವರ ನೆಚ್ಚಿನ ಶಿಷ್ಯರಾಗಿದ್ದರು.
ಹೋರಾಟಗಳ ಕಾವು ಕಡಿಮೆಯಾದಾಗ ಮೋಹನ್‍ಕುಮಾರ್ ಅವರು ನವಕರ್ನಾಟಕ ಪಬ್ಲಿಕೇಷನ್‍ನಲ್ಲಿ ಕಾರ್ಯ ನಿರ್ವಹಿಸಿದ ನಂತರ, ಹೆಚ್‍ಎಎಲ್‍ನಲ್ಲಿ ಕಾರ್ಮಿಕರಾಗಿ ಕೆಲ ವರ್ಷ ಕೆಲಸ ನಿರ್ವಹಿಸಿದರು. 2004-05ರಲ್ಲಿ ಮೈಸೂರಿನಲ್ಲಿನ ಮಾಜಿ ಸಚಿವ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆಯಲ್ಲಿ ಈ ಇಬ್ಬರೂ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಆಯ್ಕೆಯಾದವರು. ಇಂದಿಗೂ ತರಬೇತಿ ನೀಡುತ್ತಿದ್ದಾರೆ. ಅದೇ ಸಮಯದಲ್ಲಿ ಮೋಹನ್ ಮತ್ತು ಸುಧಾ ನಡುವೆ ಪ್ರೀತಿ ಅರಳಿತು. ಪಂಚಾಯತ್ ರಾಜ್ ನೌಕರರು, ಜನಪ್ರತಿನಿಧಿಗಳು ಇವರಿಬ್ಬರೂ ಸತಿ-ಪತಿಗಳಿರಬಹುದು ಎಂದುಕೊಂಡಿದ್ದರು, ಆದರೆ ಇವರಿಗೆ ಇವರುಗಳ ಮನೆಯವರು ಎಲ್ಲರಿಗೂ ತಡೆಗೋಡೆಯಾದಂತೆ ಒಂದು ದೊಡ್ಡ ತಡೆಗೋಡೆಯಾಗಿ ನಿಂತರು. ಆದರೆ, ಇವರಿಬ್ಬರ ಮದುವೆ ತಡೆದರೇ ವಿನಃ ಪ್ರೇಮವನ್ನು ತಡೆಯಲು ಸಾಧ್ಯವಾಗಲಿಲ್ಲ.
ಇವರಿಬ್ಬರ ಅನ್ಯೋನ್ಯತೆಯನ್ನು ಕಂಡು ಸಹೋದ್ಯೋಗಿಗಳು, ಜನಪ್ರತಿನಿಧಿಗಳು ನೀವು ಗಂಡ-ಹೆಂಡತಿಯಾದರೆ ಸುಖವಾಗಿರುತ್ತೀರಿ ಎಂದು ಹೇಳುತ್ತಿದ್ದರು. ಆದರೆ, ಮನೆಯವರ ಒಪ್ಪಿಗೆ ಇಲ್ಲದ ಕಾರಣ ಮದುವೆಯಾಗದೇ ಉಳಿದಿದ್ದರು. ಆದರೆ, ಪ್ರೀತಿಯನ್ನು ಕಾಪಾಡಿಕೊಂಡು ಬಂದ ಇಬ್ಬರು 25 ವರ್ಷಗಳ ಕಾಲ ಪ್ರೀತಿಸಿ, ಪ್ರೇಮ ಎಂದರೆ ಏನು ಎಂಬುದಕ್ಕೆ ಹೊಸ ವಾಖ್ಯಾನ ಬರೆದರು. ಇಬ್ಬರ ತಾಯಂದಿರಿಗೆ ವಯಸ್ಸಾಯಿತು, ಇಬ್ಬರ ಪ್ರೀತಿಯ ಆಳವನ್ನು ಕಂಡು ಮೂಕವಿಸ್ಮಿತರಾದ ಮನೆಯ ಹಿರಿಯ ಜೀವಿಗಳು, ಕೊನೆಗೂ ಮಕ್ಕಳ ಮದುವೆಗೆ ಒಪ್ಪಿಗೆ ನೀಡಿದರು. ಕೊನೆಗಾಲದಲ್ಲಿ ಮಕ್ಕಳ ಮದುವೆಯನ್ನಾದರೂ ನೋಡೋಣ ಅಂತ ಮದುವೆಗೆ ಒಪ್ಪಿಗೆ ಕೊಟ್ಟರು.
ಇಬ್ಬರು ಯಾವುದೇ ಜಾತಕ ನೋಡದೇ, ಪುರೋಹಿತರು ಮಂತ್ರವನ್ನೂ ಕೇಳದೆ ಮಂತ್ರ ಮಾಂಗಲ್ಯದ ಮೂಲಕ ಸರಳವಾಗಿ ವಿವಾಹವಾಗಿ ಮಾದರಿಯಾದರು. ಕುಟುಂಬಸ್ಥರು ಮಾತ್ರವಲ್ಲದೆ, ಇವರ ಮದುವೆಗೆ ಜನಪ್ರತಿನಿಧಿಗಳು ಮತ್ತು ಆಪ್ತ ಸ್ನೇಹಿತರು ಕೂಡ ಸಾಕ್ಷಿಯಾದರು.