DAKSHINA KANNADA
ಕರಾವಳಿಯಲ್ಲಿ ಇಂದು 204. ಮಿ.ಮೀ ಮಳೆ ಸಾಧ್ಯತೆ, ರೆಡ್ ಅಲರ್ಟ್ ಘೋಷಣೆ..!
ಮಂಗಳೂರು, ಜುಲೈ 25 : ಕರಾವಳಿ ಜಿಲ್ಲೆಗಳಲ್ಲಿ ಕಳೆದ 2 ದಿನಗಳಿಂದ ಭಾರಿ ಗಾಳಿ ಮಳೆ ಮುಂದುವೆರೆದಿದ್ದು ಅಪಾರ ನಷ್ಟ ಸಂಭವಿಸಿದೆ. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ 204. ಮಿ.ಮೀ ಮಳೆ ಸುರಿಯಲಿದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ.
ಮುಂಜಾಗೃತಾ ಕ್ರಮವಾಗಿ ದ.ಕ, ಉಡುಪಿ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಜಾಗ್ರತೆ ವಹಿಸಬೇಕು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯ ಕೈಗೊಳ್ಳಬೇಕು. ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಸದಾ ಜಾಗೃತರಾಗಿದ್ದು ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು ಮತ್ತು ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಸರ್ಕಾರ ಆದೇಶಿಸಿದೆ.
ಪ್ರವಾಸಿಗರು, ಸಾರ್ವಜನಿಕರು ನದಿ, ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪ್ರತಿ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ.
ಆನೇಕ ಕಡೆ ಇದುವರೆಗೆ ಸುರಿದ ಮಳೆಯಿಂದ ಅಪಾರ ನಷ್ಟ ಸಂಭವಿಸಿದ್ದು ಸುರತ್ಕಲ್ ಬಳಿಯ ಮುಕ್ಕದಲ್ಲಿ ಸಮುದ್ರ ಕೊರೆತದಿಂದ ತಡೆಗೋಡೆ ಸಮುದ್ರ ಪಾಲಾಗಿದ್ದು ಮನೆಗಳು ಅಪಾಯವನ್ನು ಎದುರಿಸುತ್ತಿದ್ದು ಸೂಕ್ತ ಕ್ರಮಕ್ಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ. ಮೂಡುಬಿದಿರೆಯ ಕೆಲ್ಲಪುತ್ತಿಗೆಯ ಪರಾರಿ ಬೀಡು ಎಂಬಲ್ಲಿ ರಸ್ತೆ ಇಬ್ಬಾಗವಾಗಿ ಕೆಸರು ಮಿಶ್ರಿತ ಮಳೆ ನೀರು ಸಮೀಪದ ಗದ್ದೆಗೆ ಸೇರಿ ಅಪಾರ ಕೃಷಿ ನಾಶವಾಗಿದೆ.
ರಾಜ್ಯಾದ್ಯಾಂತ ವರುಣ ಆರ್ಭ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ ಉಡುಪಿ, ಕಲಬುರ್ಗಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಳೆಯಿಂದ ಆರು ಜೀವಗಳು ಬಲಿಯಾಗಿವೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 27 ಮಂದಿ ಬಲಿಯಾಗಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇ ಗೌಡ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯವು ದ.ಕ. , ಉಡುಪಿ ಮತ್ತು ಕೊಡಗು ಜಿಲ್ಲೆಗಳ ಸಂಯೋಜಿತ ಕಾಲೇಜುಗಳಲ್ಲಿ ಯುಜಿ ವಿದ್ಯಾರ್ಥಿಗಳಿಗೆ ಮಂಗಳವಾರ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ಪರಿಷ್ಕೃತ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.