Connect with us

    BANTWAL

    ಬಂಟ್ವಾಳದ ಮೇಗಿನ ಕುರಿಯಾಳದಲ್ಲಿ 13ನೇ ಶತಮಾನದ ಶಾಸನ‌ ಪತ್ತೆ

    ಬಂಟ್ವಾಳ, ಸೆಪ್ಟೆಂಬರ್  02: ಬಂಟ್ವಾಳ ತಾಲೂಕಿನ ಮೇಗಿನ‌ ಕುರಿಯಾಳದಲ್ಲಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ‌-ಉಡುಪಿ,(ಎನ್.ಟಿ.ಸಿ.-ಎ.ಒ.ಎಂ-ನ ಅಂಗ ಸಂಸ್ಥೆ) ಇದರ ಅಧ್ಯಯನ‌ ನಿರ್ದೇಶಕ ಪ್ರೊ.ಎಸ್‌.ಎ.ಕೃಷ್ಣಯ್ಯ ಅವರು ಇತ್ತೀಚೆಗೆ ಪತ್ತೆ ಮಾಡಿದ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ.

    ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಕನ್ನಡ ಲಿಪಿಯಲ್ಲಿದ್ದು 25 ಸಾಲುಗಳನ್ನು ಹೊಂದಿದೆ. ಶಾಸನವು 178 ಸೆಂ.ಮೀ ಎತ್ತರ ಮತ್ತು 78 ಸೆಂ.ಮೀ ಅಳತೆಯನ್ನು ಹೊಂದಿರುತ್ತದೆ. ಶಕವರುಷ 1286 ನೇ ಕ್ರೋಧಿ ಸಂವತ್ಸರದ ಮೇಷ ಮಾಸ 13 (ಕ್ರಿ.ಶ 1364 ಎಪ್ರಿಲ್ 27 – ಶುಕ್ರವಾರ)ಲು ಪಾಂಡೇಶ್ವರ ದೇವರು ಹಾಗೂ ದೇವರಾಜಮ(ಯ)ತಿ ಶ್ರೀಪಾದಂಗಳ ಸಮ್ಮುಖದಲ್ಲಿ ಮಿತ್ತ ಕೂರ್ಯ್ಯಳ ಮತ್ತು ಚಿಳ್ತ ಕೂರ್ಯ್ಯಳ (ಪ್ರಸ್ತುತ ಮೇಗಿನ ಕುರಿಯಾಳ ಮತ್ತು ತಿರ್ತ ಕುರಿಯಾಳ) ವಾಸಿಗಳು ಅಕ್ಕಿ ‌ಮುಡಿ ಮತ್ತು ಗದ್ಯಾಣಗಳನ್ನು ಪಾಂಡೇಶ್ವರ ದೇವರಿಗೆ ಮಂಗಳೂರು ರಾಜ್ಯಪಾಲ ಮಾದರಸ ಒಡೆಯನ (ಕ್ರಿ. ಶ 1364) ಮೂಲಕ ದಾನ ಮಾಡಿದ ಉಲ್ಲೇಖ ಈ ಶಾಸನದಲ್ಲಿದೆ.

    ಮಿತ್ತ ಕೂರ್ಯ್ಯಲದ ರಾಜು ಎಂಬಳಿಯ ವಂಜುಕಡಿತಲೆಯನ ತಮ್ಮ ಹಲಯಬರ, ಆರ್ಯ ಬಳಿಯ ಕೊರತಿ ಸೆಟ್ಟಿತಿ‌ಯ ತಮ್ಮ ಬಂಕಿಯಣ, ಬಡಲೆ ಮಾಳಗೌಡರ ಭೂಮಿಯಿಂದ ಹಾಗೂ ಚಿಳ್ತ ಕೂರ್ಯ್ಯಲದ ಪುಂಣ್ಯಂ ಕುಂದಯ ಸಂಬು‌ ಮತ್ತನವರ ಭೂಮಿಯಿಂದ ಅರಸನಿಗೆ ಪ್ರತಿ ವರ್ಷ 34 ಗದ್ಯಾಣಗಳು ಮತ್ತು 30 ಮುಡಿ ಭತ್ತವನ್ನು ಪಾಂಡೇಶ್ವರ ದೇವರ ರಕ್ಷೋಭೋಗವಾಗಿ ಮಾದರಸ ಒಡೆಯರ ಮೂಲಕವಾಗಿ ನೀಡಿದ‌ ಉಲ್ಲೇಖವಿದೆ. ಈ ಧರ್ಮಕ್ಕೆ ಯಾರೊಬ್ಬರು ತಪ್ಪಿದರೆ ಅರಸನಿಗೆ 1000 ಗದ್ಯಾಣವನ್ನು ತೆರಬೇಕೆಂದು ತಿಳಿಸಲಾಗಿದೆ.

    ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವಿದ್ದು, ಕೊನೆಯಲ್ಲಿ ಈ ಶಾಸನವನ್ನು ಬರೆದವ ಅಲುಪಭೋವ ಎಂಬ‌ ಉಲ್ಲೇಖವಿದೆ. ಈ ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಳ್ ಸಾರ್, ಗಣೇಶ್ ಆಚಾರ್ಯ, ಸದಾಶಿವ ಆಚಾರ್ಯ, ಗುರುವಪ್ಪ ಪೂಜಾರಿ, ಕಿಶನ್ ಕುಮಾರ್ ಮೂಡುಬೆಳ್ಳೆ ಅವರು ಸಹಕಾರ ನೀಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *