DAKSHINA KANNADA
ಎಳನೀರು ಸೇವನೆಯಿಂದ137 ಮಂದಿ ಅಸ್ವಸ್ಥ ಪ್ರಕರಣ : ಅಡ್ಯಾರ್ ಬೊಂಡ ಫ್ಯಾಕ್ಟರಿ ಸೀಲ್ ಡೌನ್ ..!
ಮಂಗಳೂರು: ಎಳನೀರು ಸೇವಿಸಿ ಇದುವರೆಗೆ 137 ಮಂದಿ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಮಂಗಳೂರು ಅಡ್ಯಾರ್ನಲ್ಲಿರುವ ಬೊಂಡ ಫ್ಯಾಕ್ಟರಿ ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಜೊತೆಗೆ ಎಳನೀರು ಮತ್ತು ಇತರ ಆಹಾರೋತ್ಪನ್ನಗಳನ್ನು ಮಾರಾಟ ಮಾಡದಂತೆ ನೋಟಿಸ್ ಜಾರಿಗೊಳಿಸಿದ್ದಾರೆ. ಸೋಮವಾರ ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಸೇವಿಸಿ 137 ಮಂದಿ ಅಸ್ವಸ್ಥರಾಗಿದ್ದರು. ಹೊರ ರೋಗಿಗಳಾಗಿ 84 ಮಂದಿ ಹಾಗೂ ಒಳರೋಗಿಗಳಾಗಿ 53 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 23 ಮಂದಿ ಮಾತ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅನೇಕರು ಒಳರೋಗಿಗಳಾಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದ್ದು ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೊಂಡಾ ನೀರಿನ ಸ್ಪಾಂಲ್ಸ್ ಗಳನ್ನು ಸಂಗ್ರಹಿಸಿದ ಅಧಿಕಾರಿಗಳು ಅದನ್ನು ಬೆಂಗಳೂರಿನ ಪ್ರಯೋಗಶಾಲೆಗೆ ಕಳುಹಿಸಿಕೊಟ್ಟಿದ್ದು, ಒಂದೆರಡು ದಿನಗಳಲ್ಲಿ ಅದರ ವರದಿ ಬರಲಿದ್ದು ಬಳಿಕ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಳನೀರು ತೆಗೆದ ಮೂರು ಗಂಟೆಗಳ ಒಳಗೆ ಅದನ್ನು ಸೇವನೆ ಮಾಡಬೇಕು. ಅದು ಅವಧಿ ಮೀರಿದರೆ ಕೆಟ್ಟು ದೇಹದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿದ್ದು ಪ್ರಯೋಗಲಯದ ವರದಿ ಬಳಿಕವೇ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಗುರುವಾರ ಆಹಾರ ಸುರಕ್ಷತೆಯ ಜಿಲ್ಲಾ ಅಂಕಿತ ಅಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ತಂಡ ಮತ್ತೆ ಬೊಂಡ ಫ್ಯಾಕ್ಟರಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದೆ. ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಹಾಗೂ ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರೆ ಆಹಾರೋತ್ಪಗಳನ್ನು ಮಾರಾಟ ಮಾಡದಂತೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ, ಸದ್ಯ ಫ್ಯಾಕ್ಟರಿ ಬಂದ್ ಮಾಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫ್ಯಾಕ್ಟರಿಯ ಎಳನೀರು ಸೇವಿಸಿದ ಬಳಿಕ ಹಲವರು ಅಸ್ವಸ್ಥರಾಗಿದ್ದರು.