Connect with us

KARNATAKA

ಜಾಹೀರಾತಿಗೆ 102.90 ಕೋಟಿ ರೂ. ಖರ್ಚು ಮಾಡಿದ ಯಡಿಯೂರಪ್ಪ ಸರ್ಕಾರ..!

ಬೆಂಗಳೂರು, ಮೇ 10 : 2020-21 ಸಾಲಿನಲ್ಲಿ ಯಡಿಯೂರಪ್ಪ ಸರ್ಕಾರ ಪ್ರಚಾರದ ಜಾಹೀರಾತಿಗೆ 102.90 ಕೋಟಿ ರೂ. ಖರ್ಚು ಮಾಡುವ ಮೂಲಕ ಕಳೆದ ಮೂರು ವರ್ಷಗಳಲ್ಲೇ ಅತಿ ಹೆಚ್ಚು ಹಣವನ್ನು ಜಾಹೀರಾತು ಉದ್ದೇಶಕ್ಕಾಗಿ ವ್ಯಯಿಸಿದ ಸರ್ಕಾರ ಎಂಬ ಕುಖ್ಯಾತಿಗೂ ಪಾತ್ರವಾಗಿದೆ. ಕಳೆದ ವರ್ಷ ಕೋವಿಡ್ ಹಾಗೂ ಅದು ಹೇರಿದ ಲಾಕ್‌ಡೌನ್ ನಿಂದ ರಾಜ್ಯದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿತ್ತು.

ಅಗತ್ಯ ಕಾಮಗಾರಿ, ಮೂಲ ಸೌಕರ್ಯಗಳಿಗೆ ಹಣ ಹೊಂದಿಸಲು ಸರ್ಕಾರ ತೀವ್ರ ಪರದಾಡಿತ್ತು. ಆದಾಯ ಸಂಗ್ರಹವಾಗದೇ ಬೊಕ್ಕಸ ಖಾಲಿ ಖಾಲಿಯಾಗಿದ್ದರೂ ಯಡಿಯೂರಪ್ಪ ನೇತೃತ್ವದ ಸರ್ಕಾರ ತನ್ನ ಯೋಜನೆಗಳ ಪ್ರಚಾರದ ಜಾಹಿರಾತಿಗೇ ಕೋಟಿ ಕೋಟಿ ಹಣ ಖರ್ಚು ಮಾಡಿದೆ. ರಾಜ್ಯ ಪ್ರಸ್ತುತ ಕೋವಿಡ್ ಎರಡನೇ‌ ಅಲೆಯ ಅಬ್ಬರಕ್ಕೆ ನಲುಗಿ ಹೋಗುತ್ತಿದೆ. ವ್ಯಾಪಕವಾಗಿ ಹಬ್ಬುತ್ತಿರುವ ಕೋವಿಡ್ ಎರಡನೇ ಅಲೆಯನ್ನು ಕಟ್ಟಿಹಾಕಲು ವಿಧಿಯಿಲ್ಲದೇ ಲಾಕ್‌ಡೌನ್ ಮೊರೆ ಹೋಗಿದೆ.‌ ರಾಜ್ಯ ಕಳೆದ ಬಾರಿಯೂ ಮೊದಲ ಅಲೆಗೆ ತತ್ತರಿಸಿ ಹೋಗಿತ್ತು.

ಕೊರೊನಾ ಮಹಾಮಾರಿಗೆ ಅಂಕುಶ ಹಾಕಲು ರಾಷ್ಟ್ರೀಯ ಲಾಕ್‌ಡೌನ್ ಹೇರಲಾಗಿತ್ತು. ಬಹುತೇಕ ಎರಡು ತಿಂಗಳು ಸಂಪೂರ್ಣ ಲಾಕ್‌ಡೌನ್ ಹೇರಲಾಗಿತ್ತು. ಈ ಲಾಕ್‌ಡೌನ್ ನಿಂದ ರಾಜ್ಯದ ಆರ್ಥಿಕ ಚಟುವಟಿಕೆಗಳೆಲ್ಲವೂ ಸ್ತಬ್ಧವಾಗಿದ್ದವು. ಲಾಕ್‌ಡೌನ್ ಏಟಿಗೆ ರಾಜ್ಯ ಸರ್ಕಾರದ ಆದಾಯ ಮೂಲಗಳೆಲ್ಲವೂ ಬರಿದಾಗಿ ಹೋಗಿದ್ದವು. ಹಿಂದೆಂದೂ‌ ಕಾಣದ ಅತಿವೃಷ್ಟಿ ಇಡೀ ರಾಜ್ಯವನ್ನೇ ಅಲ್ಲಾಡಿಸಿ ಬಿಟ್ಟಿತ್ತು.

ವಿಪತ್ತು ನಿರ್ವಹಣೆ ಹಾಗೂ ಪರಿಹಾರ ಕಾಮಗಾರಿಗಳಿಗೆ ಸಾವಿರಾರು ಕೋಟಿ ಬಿಡುಗಡೆ ಮಾಡುವ ಅನಿವಾರ್ಯತೆ ಬಂದೊದಗಿತು. ಗಾಯದ ಮೇಲೆ ಬರೆ ಎಂಬಂತೆ ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟ ಯಾವ ಮಟ್ಟಕ್ಕೆ ತಲುಪಿತ್ತು ಅಂದರೆ ಹೊಸ ಕಾಮಗಾರಿಗಳು, ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಬಹುತೇಕ ಇಲಾಖೆಗಳ ಅನುದಾನಕ್ಕೇ ಕತ್ತರಿ ಹಾಕಬೇಕಾಯಿತು. ಖಾಲಿಯಾಗಿದ್ದ ರಾಜ್ಯದ ಬೊಕ್ಕಸ ನಿರ್ವಹಿಸಲು ಸಾಲದ ಮೊರೆ ಹೋಗಬೇಕಾಯಿತು. ಸರ್ಕಾರಿ ನೌಕರರ ವೇತನ ಪಾವತಿಸುವ ಸಲುವಾಗಿ ಮೊದಲ ಬಾರಿಗೆ ಸುಮಾರು 55 ಸಾವಿರ ಕೋಟಿ ರೂ. ಸಾಲ ಮಾಡಬೇಕಾಯಿತು. ರಾಜ್ಯದ ಆರ್ಥಿಕತೆ ಪಾತಾಳಕ್ಕಿಳಿದಿದ್ದರೂ ಯಡಿಯೂರಪ್ಪ ಸರ್ಕಾರ ಮಾತ್ರ ತನ್ನ ಯೋಜನೆಗಳು, ಕಾರ್ಯಕ್ರಮಗಳ ಪ್ರಚಾರ ಕಾರ್ಯಕ್ಕೇ ನೂರಾರು ಕೋಟಿ ಖರ್ಚು ಮಾಡಿದೆ.

ಕೇವಲ ಜಾಹಿರಾತಿಗೇ 102.90 ಕೋಟಿ ಖರ್ಚು!: ಆದಾಯ ಸಂಗ್ರಹವಾಗದೇ ಖಾಲಿಯಾಗಿದ್ದರೂ ಯಡಿಯೂರಪ್ಪ ಸರ್ಕಾರ ತಮ್ಮ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಪ್ರಚಾರಕ್ಕಾಗಿ ನೂರಾರು ಕೋಟಿ ಖರ್ಚು ಮಾಡಿರುವುದು ದುರಂತವೇ ಸರಿ. ಅನೇಕ ಮೂಲ ಸೌಕರ್ಯ ಅಭಿವೃದ್ಧಿ, ರಸ್ತೆ ಕಾಮಗಾರಿ, ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲು ಬೊಕ್ಕಸದಲ್ಲಿ ಹಣ ಇರಲಿಲ್ಲ. ಇಂತಹ ಆರ್ಥಿಕ ಸಂಕಷ್ಟದ ಕಾಲದಲ್ಲೂ ಬಿಜೆಪಿ ಸರ್ಕಾರ ಕಳೆದ ವರ್ಷ ನೂರಾರು ಕೋಟಿ ಹಣವನ್ನು ಬರೇ ಪ್ರಚಾರಕ್ಕೆ ಖರ್ಚು ಮಾಡಿದೆ. ಪ್ರಚಾರದ ಗೀಳಿಗೆ ಬಿದ್ದ ಬಿಎಸ್ ವೈ ಸರ್ಕಾರ ತನ್ನ ಇಮೇಜ್ ಬಿಲ್ಡ್ ಮಾಡುವ ಸಲುವಾಗಿ ಸಾರ್ವಜನಿಕರ ತೆರಿಗೆ ಹಣವನ್ನು ಜಾಹೀರಾತಿಗೆ ಸುರಿದಿದೆ.

ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ 2020-21ರಲ್ಲಿ ಯಡಿಯೂರಪ್ಪ ಸರ್ಕಾರ ಎರಡು ಪಟ್ಟು ಹೆಚ್ಚಿನ ಹಣವನ್ನು ಜಾಹೀರಾತಿಗೆ ವ್ಯಯಿಸಿ ಬೇಕಾಬಿಟ್ಟಿ ದುಂದುವೆಚ್ಚ ಮಾಡಿದೆ ಎಂದು ತಿಳಿದು ಬಂದಿದೆ. ವಾರ್ತಾ ಇಲಾಖೆ ನೀಡಿದ ಅಂಕಿ – ಅಂಶದ ಪ್ರಕಾರ 2020-21ಸಾಲಿನಲ್ಲಿ ಬಿಎಸ್​ವೈ ನೇತೃತ್ವದ ಸರ್ಕಾರ ತನ್ನ ಕಾರ್ಯಕ್ರಮ, ಯೋಜನೆಗಳ ಪ್ರಚಾರದ ಜಾಹೀರಾತಿಗಾಗಿ ಬರೋಬ್ಬರಿ 102.90 ಕೋಟಿ ರೂ. ದುಂದು ವೆಚ್ಚ ಮಾಡಿದೆ.

ಪ್ರಮುಖ ಅಭಿವೃದ್ಧಿ ಕಾಮಗಾರಿಗೇ ಹಣ ನೀಡಲು ಬೊಕ್ಕಸದಲ್ಲಿ ಕಾಸಿಲ್ಲದ ಸಂದರ್ಭದಲ್ಲಿ ಯಡಿಯೂರಪ್ಪ ಸರ್ಕಾರ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಬರೇ ತಮ್ಮ ಸರ್ಕಾರದ ಯೋಜನೆಗಳ ಪ್ರಚಾರಕ್ಕಾಗಿ ಇಷ್ಟು ದೊಡ್ಡ ಮಟ್ಟಿನ ಹಣ ಖರ್ಚು ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ.ಎಲ್ಲ ಸರ್ಕಾರಗಳು ತಮ್ಮ ಕಾರ್ಯಕ್ರಮ, ಯೋಜನೆಗಳ ಜಾಹೀರಾತು ನೀಡುವುದು ಸಾಮಾನ್ಯ. ಆದರೆ, ಈ ಬಾರಿ ತೀವ್ರ ಆರ್ಥಿಕ ಸಂಕಷ್ಟದ ಮಧ್ಯೆ ಇಷ್ಟು ದೊಡ್ಡ ಪ್ರಮಾಣದ ಜಾಹೀರಾತು ಖರ್ಚಿನ ಅನಿವಾರ್ಯತೆ ಏನಿತ್ತು ಎಂಬುದು ಎಲ್ಲರ ಪ್ರಶ್ನೆಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *