LATEST NEWS
ಮಾರ್ಚ್ ಒಳಗೆ 100 ರೂಪಾಯಿ ಹಳೆ ನೋಟು ಸ್ಥಗಿತ
ಮಂಗಳೂರು ಜನವರಿ 22: 100 ರೂಪಾಯಿ ಹಳೆಯ ನೋಟುಗಳನ್ನು ಮಾರ್ಚ್ ಅಂತ್ಯದೊಳಗೆ ಹಿಂಪಡೆಯಲು ಆರ್ ಬಿಐ ನಿರ್ಧರಿಸಿದೆ ಎಂದು ಆರ್’ಬಿಐ ಸಹಾಯಕ ಮಹಾಪ್ರಬಂಧಕ ಬಿ.ಎಂ.ಮಹೇಶ್ ತಿಳಿಸಿದ್ದಾರೆ.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಭದ್ರತಾ ಸಮಿತಿ ಮತ್ತು ನಗದು ನಿರ್ವಹಣಾ ಸಮಿತಿ ಸಬೆಯಲ್ಲಿ ಆರ್’ಬಿಐ ಸಹಾಯಕ ಮಹಾಪ್ರಬಂಧಕ ಬಿ.ಎಂ.ಮಹೇಶ್ ಅವರು ಮಾತನಾಡಿದರು.
ಹಳೆಯ ನೋಟುಗಳಂತೆ ಕಾಣುವ ಖೋಟಾನೋಟುಗಳು ಹೆಚ್ಚಾಗಿರುವುದರಿಂದ ರೂ.100ರ ಮುಖಬೆಲೆಯ ಹಳೆಯ ಸೀರಿಸ್’ನ ನೋಟುಗಳನ್ನು ಹಿಂಪಡೆಯಲಾಗುತ್ತಿದೆ. ಹಳೆಯ ಸೀರಿಸ್ ಹೊಂದಿರುವ 100ರ ಕರೆನ್ಸಿ ನೋಟುಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ. ಕಳೆದ 6 ವರ್ಷಗಳಿಂದ ಈ ನೋಟುಗಳು ಮುದ್ರಣವಾಗುತ್ತಿಲ್ಲ. ಆದರೆ, ಈ ಹಿಂದೆಯೇ ಮುದ್ರಣಗೊಂಡಿರುವ ಈ ನೋಟುಗಳನ್ನು ಸಂಪೂರ್ಣವಾಗಿ ಹಿಂಪಡೆಯುವುದು ಆರ್’ಬಿಐ ಉದ್ದೇಶವಾಗಿದೆ. ಚಲಾವಣೆಯಲ್ಲಿರುವ ಹಳೆಯ ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗುತ್ತಾ ಬರಲಾಗಿದೆ ಮಾರ್ಚ್ ಅಂತ್ಯಕ್ಕೆ ಇದೂ ಪೂರ್ಣವಾಗಲಿದೆ ಎಂದು ಹೇಳಿದ್ದಾರೆ.
ನೋಟು ವಾಪಸ್ ಕಾರಣಕ್ಕೆ ಜನತೆ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಸ್ವಚ್ಛ ನೋಟುಗಳು ಜನತೆಯ ಕೈಗೆ ಸಿಗಬೇಕೆಂಬುದು ಮಾತ್ರ ಉದ್ದೇಶ. ಇದು ನೋಟು ಅಮಾನ್ಯೀಕರಣ ಅಲ್ಲ ಎಂದು ಇದೇ ವೇಳೆ ಮಹೇಶ್ ಅವರು ಸ್ಪಷ್ಟಪಡಿಸಿದ್ದಾರೆ.
ಹೊಸ ಸೀರಿಸ್ ಹೊಂದಿರುವ 100ರ ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿರಬೇಕು. ಬ್ಯಾಂಕ್ ನವರು ಅಂತಹ ನೋಟುಗಳನ್ನು ಇರಿಸಿಕೊಳ್ಳದೆ ಕರೆನ್ಸಿ ಚೆಸ್ಟ್’ಗೆ ಒಪ್ಪಿಸಬೇಕು ಎಂದು ಸೂಚಿಸಿದ್ದಾರೆ.