KARNATAKA
ಪೊಲೀಸ್ ಕಮಿಷನರ್ ಕಚೇರಿ ಬಳಿಯೇ ಗಾಜು ಒಡೆದು ₹4.50 ಲಕ್ಷ ಹಣ ಕಳವು

ಬೆಂಗಳೂರು, ಜುಲೈ 24: ಇನ್ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್ ಕಚೇರಿ ಸಮೀಪದ ಕಾನೂನು ಮಾಪನ ಇಲಾಖೆ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದಿರುವ ದುಷ್ಕರ್ಮಿಗಳು, ₹4.50 ಲಕ್ಷ ಕದ್ದುಕೊಂಡು ಪರಾರಿಯಾಗಿದ್ದಾರೆ.
ಹಣ ಕಳೆದುಕೊಂಡಿರುವ ಲಕ್ಷ್ಮೀಶ್ ಎಂಬುವರು ದೂರು ನೀಡಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಓಜಿಕುಪ್ಪಂ ತಂಡದವರು ಕೃತ್ಯ ಎಸಗಿರುವ ಅನುಮಾನವಿದೆ ಎಂದು ವಿಧಾನಸೌಧ ಠಾಣೆ ಪೊಲೀಸ್ ಮೂಲಗಳು ಹೇಳಿವೆ.
ಹೊಸ ಮನೆ ನಿರ್ಮಾಣಕ್ಕೆ ಪಡೆದಿದ್ದ ಸಾಲದ ಕಂತು ಕಟ್ಟಲೆಂದು ಲಕ್ಷ್ಮೀಶ್ ಅವರು ಮಹದೇವಪುರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ₹ 4.50 ಲಕ್ಷ ಡ್ರಾ ಮಾಡಿಕೊಂಡಿದ್ದರು. ಅದನ್ನು ಬ್ಯಾಂಕ್‌ಗೆ ಪಾವತಿಸಲು ನಗರಕ್ಕೆ ಬಂದಿದ್ದರು. ಕಾನೂನು ಮಾಪನ ಇಲಾಖೆ ಕಟ್ಟಡದ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ, ಕೆಲಸ ನಿಮಿತ್ತ ಕಚೇರಿಗೆ ಹೋಗಿದ್ದರು.’
ಲಕ್ಷ್ಮೀಶ್ ಬಳಿ ಹಣವಿರುವುದನ್ನು ತಿಳಿದಿದ್ದ ದುಷ್ಕರ್ಮಿಗಳು, ಮಹದೇವಪುರದಿಂದ ಪಲ್ಸರ್ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಲಕ್ಷ್ಮೀಶ್ ಅವರ ಕಾರಿನ ಗಾಜು ಒಡೆದು, ಒಳಗಿದ್ದ ಹಣದ ಬ್ಯಾಗ್ ಕದ್ದುಕೊಂಡು ಪರಾರಿಯಾಗಿದ್ದಾರೆ. ಲಕ್ಷ್ಮೀಶ್ ವಾಪಸು ಕಾರಿನ ಬಳಿ ಬಂದಾಗ ವಿಷಯ ಗೊತ್ತಾಗಿದೆ ಎಂದೂ ತಿಳಿಸಿವೆ.
